ADVERTISEMENT

ಆಸ್ತಿ ತೆರಿಗೆ ಪಾವತಿಸದ ಕಂಪನಿಗಳಿಗೆ ಬೀಗ

ಬಿಬಿಎಂಪಿ ಅಧಿಕಾರಿಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 19:32 IST
Last Updated 10 ಜನವರಿ 2020, 19:32 IST
ಟ್ಯಾಂಗ್ಲಿನ್ ಡೆವಲಪ್‍ಮೆಂಟ್ಸ್‌ನವರು ಬಾಕಿ ಆಸ್ತಿ ತೆರಿಗೆಯ ಚೆಕ್‌ ಅನ್ನು ಉಪ ಆಯುಕ್ತ ಕೆ.ಶಿವೇಗೌಡ ಅವರಿಗೆ ನೀಡಿದರು.
ಟ್ಯಾಂಗ್ಲಿನ್ ಡೆವಲಪ್‍ಮೆಂಟ್ಸ್‌ನವರು ಬಾಕಿ ಆಸ್ತಿ ತೆರಿಗೆಯ ಚೆಕ್‌ ಅನ್ನು ಉಪ ಆಯುಕ್ತ ಕೆ.ಶಿವೇಗೌಡ ಅವರಿಗೆ ನೀಡಿದರು.   

ರಾಜರಾಜೇಶ್ವರಿನಗರ: ಹಲವಾರು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಕಂಪನಿಗಳಿಗೆ, ಹೋಟೆಲ್‍ಗಳಿಗೆ ಮತ್ತು ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ನೀಡಿ ಬೀಗ ಹಾಕಿದ್ದಾರೆ.

ಪೀಣ್ಯದ ಶಕ್ತಿ ಇಂಡಸ್ಟ್ರೀಸ್ ₹32 ಲಕ್ಷ, ಶರವಣ ಐರನ್ ಅಲಯನ್ಸ್ ₹32 ಲಕ್ಷ, ಮುರಳೀಧರ ಡಿಸ್ಟಿಲರೀಸ್ ₹32 ಲಕ್ಷ, ಶಿವಬೋಜ್ ಹೋಟೆಲ್ ₹32 ಲಕ್ಷ, ಜ್ಞಾನಭಾರತಿ ಬಡಾವಣೆಯ ಮೆಡ್‍ಸಾಲ್ ಆಸ್ಪತ್ರೆ, ಜೈನ್ ಚಾರಿಟಬಲ್ ಟ್ರಸ್ಟ್ ₹32.42 ಲಕ್ಷ, ಮೈಸೂರು ರಸ್ತೆಯ ಲೀಲಾ ಸ್ಕಾಟಿಸ್ ಪ್ರೈವೇಟ್ ಲಿಮಿಟೆಡ್ ₹1.53 ಕೋಟಿ, ಮೈಲಸಂದ್ರದ ಟ್ಯಾಂಗ್ಲಿನ್ ಡೆವಲಪ್‍ಮೆಂಟ್ಸ್ ಪ್ರೈ.ಲಿ. ₹13.79 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವು.

ಮೈಲಸಂದ್ರದ ಟ್ಯಾಂಗ್ಲಿನ್ ಡೆವಲಪ್‍ಮೆಂಟ್ಸ್‌ನವರು ಸ್ಥಳದಲ್ಲೇ ₹5.72 ಕೋಟಿ ಚೆಕ್ ನೀಡಿ ಕಟ್ಟಡಕ್ಕೆ ಬೀಗಮುದ್ರೆ ಹಾಕದಂತೆ ಮನವಿ ಮಾಡಿಕೊಂಡರು. ಮೈಸೂರು ರಸ್ತೆಯ ಲೀಲಾ ಸ್ಕಾಟಿಸ್ ಪ್ರೈವೇಟ್ ಲಿಮಿಟೆಡ್‍ನ ಮಾಲೀಕರು 5 ವರ್ಷಕ್ಕೂ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡದಲ್ಲಿದ್ದ ಪೀಠೋಪಕರಣಗಳನ್ನು ಜಪ್ತಿ ಮಾಡಿ ಕಟ್ಟಡಕ್ಕೆ ಬೀಗ ಹಾಕಲಾಯಿತು.

ADVERTISEMENT

ಪಾಲಿಕೆಯ ಉಪ ಆಯುಕ್ತ ಕೆ.ಶಿವೇಗೌಡ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳಾದ ಸಂತೋಷ್‍ಕುಮಾರ್, ಜಿ.ಹನುಮಂತಪ್ಪ, ಬಸವೇಗೌಡ, ಶ್ರೀನಿವಾಸ್ ಕಾರ್ಯಾಚರಣೆ ನಡೆಸಿದರು.

ಕೆ.ಶಿವೇಗೌಡ ಮಾತನಾಡಿ, ‘ಬಾಕಿ ಉಳಿಸಿಕೊಂಡಿರುವವರು ತಿಂಗಳೊಳಗಾಗಿ ತೆರಿಗೆ ಪಾವತಿಸದಿದ್ದರೆ ಬೀಗಮುದ್ರೆ ಹಾಕಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.