ADVERTISEMENT

ಮೊಬೈಲ್‌ ಮರಳಿಸಲು ಹಣ ಪಡೆದ ಪೊಲೀಸರು: ಫೇಸ್‌ಬುಕ್‌ನಲ್ಲಿ ದೂರು

ಬೆಳ್ಳಂದೂರು ಠಾಣೆ ಸಿಬ್ಬಂದಿ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 20:35 IST
Last Updated 28 ಏಪ್ರಿಲ್ 2019, 20:35 IST

ಬೆಂಗಳೂರು: ‘ಕ್ಯಾಬ್‌ನಲ್ಲಿ ಕಳೆದು ಹೋಗಿದ್ದ ಮೊಬೈಲ್‌ ಪತ್ತೆ ಹಚ್ಚಿದ್ದ ಪೊಲೀಸರು, ಅದನ್ನು ನಮಗೆ ವಾಪಸ್‌ ಕೊಡಲು ₹2,500 ಪ‍ಡೆದಿದ್ದಾರೆ’ ಎಂದು ಆರೋಪಿಸಿ ಯುವತಿಯೊಬ್ಬರು, ನಗರ ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಿದ್ದಾರೆ.

ಯುವತಿ, ‘ಬೆಂಗಳೂರು ಸಿಟಿ ಪೊಲೀಸ್’ ಫೇಸ್‌ಬುಕ್‌ನ ಪೇಜ್‌ ಮೂಲಕ ದೂರು ರವಾನಿಸಿದ್ದಾರೆ. ‘ನಾನು ಸೈನಿಕರ ಕುಟುಂಬದ ಮಗಳು. ಬೆಂಗಳೂರು ಪೊಲೀಸರ ಪ್ರಾಮಾಣಿಕತೆ ಬಗ್ಗೆ ಗೌರವವಿತ್ತು. ಈ ಘಟನೆಯಿಂದ ಕೆಟ್ಟ ಅನುಭವವಾಗಿದೆ. ಈ ಘಟನೆ ನನಗೆ ಆಘಾತ ತಂದಿದೆ’ ಎಂದು ಹೇಳಿಕೊಂಡಿದ್ದಾರೆ.

‘ನನ್ನ ಸ್ನೇಹಿತ, ಅವಸರದಲ್ಲಿ ಕ್ಯಾಬ್‌ ನಲ್ಲಿ ಮೊಬೈಲ್‌ ಬಿಟ್ಟು ಇಳಿದಿದ್ದರು. ಚಾಲಕ, ಸ್ಥಳದಿಂದ ಹೊರಟು ಹೋಗಿದ್ದ. ಚಾಲಕನ ಬಳಿ ಮೊಬೈಲ್‌ ಇತ್ತು. ಎಷ್ಟೇ ಪ್ರಯತ್ನಿಸಿದ್ದರೂ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸ್ನೇಹಿತ ಹಾಗೂ ನಾನು, ಬೆಳ್ಳಂದೂರು ಠಾಣೆಗೆ ಹೋಗಿ ಅಲ್ಲಿಯ ಸಿಬ್ಬಂದಿಗೆ ಘಟನೆ ಬಗ್ಗೆ ತಿಳಿಸಿದ್ದೆವು. ಚಾಲಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು, ವಿಚಾರಣೆ ನಡೆಸಿದ್ದರು. ನಮಗೆ ಮರುದಿನ ಬರುವಂತೆ ಹೇಳಿ ಕಳುಹಿಸಿದ್ದರು’ ಎಂದು ಯುವತಿ ತಿಳಿಸಿದ್ದಾರೆ.

ADVERTISEMENT

‘ಮರುದಿನ ಠಾಣೆಗೆ ಹೋದಾಗ, ಮೊಬೈಲ್ ಸಿಕ್ಕಿರುವುದಾಗಿ ಹೇಳಿದ್ದರು. ಅದನ್ನು ಕೊಡಬೇಕಾದರೆ ₹ 7,000 ನೀಡುವಂತೆ ಠಾಣೆಯಲ್ಲಿದ್ದ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು. ಹಣ ಕೊಡುವುದಿಲ್ಲ. ಹಿರಿಯ ಅಧಿಕಾರಿಗಳಿಗೆ ದೂರು ಕೊಡುತ್ತೇವೆಂದು ಹೇಳಿದ್ದಕ್ಕೆ, ‘ಅವರ ಬಳಿ ಹೋದರೆ ಹೆಚ್ಚು ಹಣ ಕೇಳುತ್ತಾರೆ’ ಎಂದು ಸಿಬ್ಬಂದಿ ಉತ್ತರಿಸಿದ್ದರು.’

‘ನಮ್ಮ ಜೊತೆ ಚೌಕಾಸಿ ನಡೆಸಿದ್ದ ಸಿಬ್ಬಂದಿ, ಕೊನೆಗೇ ₹ 2,500 ಕೊಡಲು ಒತ್ತಾಯಿಸಿದ್ದರು. ಅನಿವಾರ್ಯವಾಗಿ ಹಣಕೊಟ್ಟು ಮೊಬೈಲ್‌ ಪಡೆದು ಕೊಂಡೆವು’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

‘ಮೊದಲೇ ನಾವು ಮೊಬೈಲ್‌ ಕಳೆದುಕೊಂಡು ಕಂಗಾಲಾಗಿದ್ದೆವು. ನಮಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಹಣ ವಸೂಲಿ ಮಾಡಿದ್ದು ಸರಿಯೇ. ಪೊಲೀಸರ ಮೇಲಿನ ನಂಬಿಕೆಯೇ ಹೊರಟುಹೋಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ತನಿಖೆಗೆ ಸೂಚನೆ: ಯುವತಿಯ ದೂರಿಗೆ ಸ್ಪಂದಿಸಿರುವ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಯುವತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಫೇಸ್‌ಬುಕ್‌ ಮೂಲಕ ಮೊಬೈಲ್ ನಂಬರ್ ಕೇಳಿದರೂ ಕೊಡುತ್ತಿಲ್ಲ. ಠಾಣೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.