ADVERTISEMENT

ಬೆಂಗಳೂರು | ಗರುಡಾ ಮಾಲ್‌ನಲ್ಲಿ ಗಲಾಟೆ: ದೂರು– ಪ್ರತಿದೂರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 16:21 IST
Last Updated 10 ಡಿಸೆಂಬರ್ 2023, 16:21 IST
ಗರುಡಾ ಮಾಲ್‌
ಗರುಡಾ ಮಾಲ್‌   

ಬೆಂಗಳೂರು: ಗರುಡಾ ಮಾಲ್‌ನಲ್ಲಿ ಸಿನಿಮಾ ನೋಡಲು ಬಂದಿದ್ದ ಮಹಿಳೆ ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗಲಾಟೆ ನಡೆದಿದ್ದು, ಅಶೋಕನಗರ ಠಾಣೆಯಲ್ಲಿ ದೂರು – ಪ್ರತಿ ದೂರು ದಾಖಲಾಗಿದೆ.

‘ಶನಿವಾರ ರಾತ್ರಿ ನಡೆದಿರುವ ಗಲಾಟೆ ಸಂಬಂಧ ಮಹಿಳೆ ಹಾಗೂ ಭದ್ರತಾ ಸಿಬ್ಬಂದಿ ಪ್ರತ್ಯೇಕ ದೂರು ನೀಡಿದ್ದಾರೆ. ಎರಡು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಮಹಿಳೆ, ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಗೆ ಬಂದಿದ್ದರು. ಚಿತ್ರಮಂದಿರದಲ್ಲಿ ಪರ್ಸ್ ಮರೆತು ಮನೆಗೆ ಹೋಗಿದ್ದರು. ಸ್ವಚ್ಚತಾ ಸಿಬ್ಬಂದಿಗೆ ಪರ್ಸ್ ಸಿಕ್ಕಿತ್ತು. ತಡರಾತ್ರಿ ಸ್ನೇಹಿತರ ಜೊತೆ ಪುನಃ ಮಾಲ್‌ಗೆ ಹೋಗಿದ್ದ ಮಹಿಳೆ, ಪರ್ಸ್ ಬಗ್ಗೆ ವಿಚಾರಿಸಿದ್ದರು. ವೈಯಕ್ತಿಕ ದಾಖಲೆಗಳನ್ನು ನೀಡಿದರೆ, ಪರ್ಸ್ ವಾಪಸು ಕೊಡುವುದಾಗಿ ಭದ್ರತಾ ಸಿಬ್ಬಂದಿ ಹೇಳಿದ್ದರು. ಅದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು’ ಎಂದು ತಿಳಿಸಿವೆ.

ADVERTISEMENT

‘ಭದ್ರತಾ ಸಿಬ್ಬಂದಿ ಮೇಲೆ ಮಹಿಳೆ ಹಲ್ಲೆ ನಡೆಸಿದ್ದರೆಂದು ಹೇಳಲಾಗಿದೆ. ಗಲಾಟೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಪರ್ಸ್‌ನಲ್ಲಿದ್ದ ₹ 8 ಸಾವಿರ ಕಳ್ಳತನ ಆಗಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.