ADVERTISEMENT

‘ಸಮಗ್ರ ಮಾಸ್ಟರ್‌ ಪ್ಲಾನ್‌–2035’ಕ್ಕೆ ಸಿದ್ಧತೆ: ಎಸ್.ಆರ್.ವಿಶ್ವನಾಥ್

ನಗರ ಯೋಜನಾ ತಜ್ಞರೊಂದಿಗೆ ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 21:24 IST
Last Updated 29 ಡಿಸೆಂಬರ್ 2020, 21:24 IST
ಎಸ್.ಆರ್.ವಿಶ್ವನಾಥ್
ಎಸ್.ಆರ್.ವಿಶ್ವನಾಥ್    

ಬೆಂಗಳೂರು: ’ಕ್ಷಿಪ್ರವಾಗಿ ಬೆಳೆಯುತ್ತಿ ರುವ ನಗರದ ಸರ್ವಾಂಗೀಣ ಅಭಿ ವೃದ್ಧಿಗೆ ಪೂರಕವಾಗಿ ’ಸಮಗ್ರ ಮಾಸ್ಟರ್ ಪ್ಲಾನ್-2035‘ ಅನ್ನು ರೂಪಿಸ ಲಾಗುವುದು‘ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಸಂಬಂಧ ಆರಂಭಿಕ ಸಭೆಯು ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಈ ವರ್ಚುವಲ್ ಸಭೆಯಲ್ಲಿ ನಗರ ಯೋಜನಾ ತಜ್ಞರೊಂದಿಗೆ ಸಂವಾದ ನಡೆಸಿದರು.

ADVERTISEMENT

ಈ ವೇಳೆ ಮಾತನಾಡಿದ ಅವರು, ’ಮುಂದಿನ 20-25 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ನಿರ್ಧರಿಸಲಾಗಿದೆ. ಸಂಘ–ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ನಗರ ಯೋಜನಾ ತಜ್ಞರ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ‘ ಎಂದರು.

’ಬಿಬಿಎಂಪಿ ವ್ಯಾಪ್ತಿ ವಿಸ್ತಾರವಾಗುತ್ತಿದ್ದಂತೆಯೇ ಬೆಂಗಳೂರು ನಗರದ ವ್ಯಾಪ್ತಿಯೂ ಹಿಗ್ಗಲಿದೆ. ಇದರಿಂದ ಬೃಹತ್ ಬೆಂಗಳೂರಿನ ವ್ಯಾಪ್ತಿಗೆ ಹೊಸ ಹೊಸ ಪ್ರದೇಶಗಳು ಸೇರ್ಪಡೆಗೊಳ್ಳುತ್ತವೆ. ಅಂತಹ ಪ್ರದೇಶಗಳಿಗೆ ಸೂಕ್ತವಾದ ಮೂಲಸೌಕರ್ಯಗಳನ್ನು ಒದಗಿಸುವುದು ಬಿಡಿಎ, ಬಿಎಂಆರ್‌ಡಿಎ, ಬಿಬಿಎಂಪಿ ಸೇರಿದಂತೆ ಇನ್ನಿತರ ಸಂಸ್ಥೆಗಳ ಕರ್ತವ್ಯ. ಈ ದಿಸೆಯಲ್ಲಿ ಬಿಡಿಎ ನೇತೃತ್ವದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ‘ ಎಂದು ತಿಳಿಸಿದರು.

‘ಮಾಸ್ಟರ್ ಪ್ಲಾನ್ 2035 ರಲ್ಲಿ ಕೆರೆ, ಉದ್ಯಾನ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೆರೆಗಳ ಪುನರುಜ್ಜೀವನಕ್ಕೆ ಕಾಲಮಿತಿ ನಿಗದಿ, ಪ್ರಸ್ತುತ ಇರುವ ಉದ್ಯಾನಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವುದು, ಹಸಿರು ಬೆಳೆಸುವುದು ಸೇರಿದಂತೆ ಇನ್ನಿತರೆ ಪರಿಸರ ಸ್ನೇಹಿ ಕ್ರಮಗಳನ್ನು ಮಹಾಯೋಜನೆಯಲ್ಲಿ ಅಳವಡಿಸಲಾಗುತ್ತದೆ’ ಎಂದರು.

ಬಿಡಿಎ ಆಯುಕ್ತ ಡಾ.ಮಹದೇವ್ ಮಾತನಾಡಿ, ‘ನಗರ ಯೋಜನಾ ತಜ್ಞರು ನೀಡುವ ಸಲಹೆ ಸೂಚನೆಗಳನ್ನು ಮಾಸ್ಟರ್ ಪ್ಲಾನ್‌ನಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಈ ಮೂಲಕ ಒಂದು ದೂರದೃಷ್ಟಿಯುಳ್ಳ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತದೆ’ ಎಂದು ಹೇಳಿದರು.

ವರ್ಚುವಲ್ ಸಭೆಯಲ್ಲಿ ನಗರ ಯೋಜನಾ ತಜ್ಞರಾದ ಹರೀಶ್, ಸ್ನೇಹ ನಂದಿಹಾಳ್, ಸ್ಮಿತಾ ಸಿಂಗ್, ಬೃಂದಾಶಾಸ್ತ್ರಿ, ವಿಶ್ವನಾಥ್, ಮೀನಾಕ್ಷಿ ಪ್ರಭು, ಡಾ.ಚಂಪಕಾ ರಾಜಗೋಪಾಲ್, ಐಐಎಸ್ಸಿಯ ಆಶಿಶ್ ವರ್ಮಾ, ನಿತಿನ್ ಶೇಷಾದ್ರಿ, ರವೀಂದ್ರ ಶ್ರೀನಿವಾಸ್ ಮತ್ತು ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.