ADVERTISEMENT

ಹಸಿ ಕಸದಿಂದ ಸಾಂದ್ರೀಕೃತ ಜೈವಿಕ ಅನಿಲ ಉತ್ಪಾದನೆ

ನಿತ್ಯ 75 ಟನ್‌ ಸಾಮರ್ಥ್ಯದ ಸ್ಥಾವರ ನಿರ್ಮಾಣಕ್ಕೆ ಅನುಮತಿ ಕೋರಿ ಪತ್ರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 21:30 IST
Last Updated 12 ಏಪ್ರಿಲ್ 2021, 21:30 IST

ಬೆಂಗಳೂರು: ಹಸಿ ಕಸ ಬಳಸಿ ಸಾಂದ್ರೀಕೃತ ಜೈವಿಕ ಅನಿಲ ಉತ್ಪಾದಿಸುವ ಸ್ಥಾವರ ಸ್ಥಾಪಿಸಲು ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಸಂಸ್ಥೆ ಮುಂದೆ ಬಂದಿದೆ. ನಿತ್ಯ 75 ಟನ್‌ ಸಾಮರ್ಥ್ಯದ ಸ್ಥಾವರ ಸ್ಥಾಪಿಸುವ ಬಗ್ಗೆ ಗೇಲ್‌ ಗ್ಯಾಸ್‌ ಸಂಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ವಿವೇಕ ವಾಥೋಡ್ಕರ್‌ ಅವರು ಬಿಬಿಎಂಪಿಯ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ.

ನಗರದಲ್ಲಿ ಜೈವಿಕ ಅನಿಲ ಸ್ಥಾವರ ನಿರ್ಮಿಸುವ ಮೂಲಕ ಬೆಂಗಳೂರನ್ನು ಸ್ವಚ್ಛಭಾರತ ಅಭಿಯಾನದಡಿ ಸ್ವಚ್ಛ ನಗರವನ್ನಾಗಿ ರೂಪಿಸಲು ಗೇಲ್ ಗ್ಯಾಸ್‌ ಸಂಸ್ಥೆ ಬಿಬಿಎಂಪಿ ಜೊತೆ ಕೈಜೋಡಿಸಲಿದೆ ಎಂದು ವಾಥೋಡ್ಕರ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ನಗರದ ಉತ್ತರ ಭಾಗದಲ್ಲಿ ನಿತ್ಯ 75 ಟನ್‌ ಅನಿಲ ಉತ್ಪಾದನೆ ಸಾಮರ್ಥ್ಯದ ಸ್ಥಾವರ ಸ್ಥಾಪಿಸುವ ಬಗ್ಗೆ ನಾವು ಈಗಾಗಲೇ ಕಸ ವಿಲೇವಾರಿ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌ ಅವರ ಜೊತೆ ಚರ್ಚಿಸಿದ್ದೇವೆ. ಈ ಘಟಕದಲ್ಲಿ ಹಸಿ ಕಸ ಬಳಸಿ ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಉತ್ಪಾದಿಸಲಿದ್ದೇವೆ. ಈ ಉದ್ದೇಶಕ್ಕೆ ಬಿಬಿಎಂಪಿಯು ಉಚಿತವಾಗಿ ಜಮೀನು ಒದಗಿಸಬೇಕು. ಗೇಲ್‌ ಗ್ಯಾಸ್‌ ಸಂಸ್ಥೆಯು ಸ್ವಂತ
ಖರ್ಚಿನಲ್ಲಿ ಸಾಂದ್ರೀಕೃತ ಜೈವಿಕ ಅನಿಕ ಸ್ಥಾವರ ನಿರ್ಮಿಸಿ, ನಿರ್ವಹಿಸಲಿದೆ. ಮಾತುಕತೆ ವೇಳೆ ಪ್ರಸ್ತಾಪಿಸಿ
ದಂತೆ ಸ್ಥಾವರದಲ್ಲಿ ಹಸಿ ಕಸ ಬಳಸಿ ಉತ್ಪಾದಿಸುವ ಜೈವಿಕ ಅನಿಲವನ್ನು ಸಂಸ್ಥೆಯೇ ಬಳಸಿಕೊಳ್ಳಲಿದೆ’ ಎಂದುವಿವೇಕ ವಾಥೋಡ್ಕರ್‌ ತಿಳಿಸಿದ್ದಾರೆ.

ADVERTISEMENT

‘ಸಿಬಿಜಿ ಬಳಸಿಕೊಳ್ಳುವುದಕ್ಕೆ ಪೂರಕವಾಗಿ ಸ್ಥಾವರದ ಪಕ್ಕದಲ್ಲಿ ಸಿಎನ್‌ಜಿ ಸ್ಟೇಷನ್‌ ಮತ್ತು ಇತರ ಮೂಲಸೌಕರ್ಯ ನಿರ್ಮಾಣಕ್ಕಾಗಿ 4ರಿಂದ 5 ಎಕರೆಗಳಷ್ಟು ಹೆಚ್ಚುವರಿ ಜಾಗದ ಅಗತ್ಯವಿದೆ. ಈಸ್ಥಾವರದ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರಂತರವಾಗಿ ಹಸಿಕಸವನ್ನು ಪೂರೈಸುವ ಕುರಿತು ಬಿಬಿಎಂಪಿ ಆಶ್ವಾಸನೆ ನೀಡಬೇಕು. ಹಸಿ ಕಸ ಪೂರೈಕೆ, ಜಾಗದ ಲಭ್ಯತೆ ಸ್ಥಾವರದ ಸಾಮರ್ಥ್ಯದ ಕುರಿತ ಎಲ್ಲ ವಿಚಾರಗಳ ಬಗ್ಗೆ ನಿರ್ಧಾರಕ್ಕೆ ಬರುವ ಮುನ್ನ ನಮ್ಮ ಸಂಸ್ಥೆಯ ಆಡಳಿತ ಮಂಡಳಿಯಿಂದ ಅಂತಿಮ ಅನುಮೋದನೆ ಪಡೆಯಲು ಬಿಬಿಎಂಪಿ ತಾತ್ವಿಕ ಸಮ್ಮತಿ ನೀಡಬೇಕು. ಬಳಿಕ ವಿಸ್ತೃತ ಪ್ರಸ್ತಾವನೆಯನ್ನು ಸಂಸ್ಥೆಯು ಬಿಬಿಎಂಪಿಗೆ ಸಲ್ಲಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

ನಗರ ಅನಿಲ ಪೂರೈಕೆ(ಸಿಜಿಡಿ) ಯೋಜನೆ ಅನುಷ್ಠಾನಕ್ಕಾಗಿ ಗೇಲ್‌ ಗ್ಯಾಸ್‌ ಸಂಸ್ಥೆಯು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯ (ಪಿಎನ್‌ಜಿಆರ್‌ಬಿ) ಅನುಮತಿ ಪಡೆದಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನೈಸರ್ಗಿಕ ಅನಿಲ ಕೊಳವೆ ಜಾಲವನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. ಈ ಯೋಜನೆ ಮೂಲಕ ಸಂಸ್ಥೆಯು ಮನೆ ಬಳಕೆಗೆ, ವಾಣಿಜ್ಯ ಬಳಕೆಗೆ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಕೊಳವೆಯಲ್ಲಿ ನೈಸರ್ಗಿಕ ಅನಿಲವನ್ನು (ಪಿಎನ್‌ಜಿ) ಹಾಗೂ ಸಾರಿಗೆ ಉದ್ದೇಶಕ್ಕೆ ಸಾಂದ್ರೀಕೃತ ನೈಸರ್ಗಿಕ ಅನಿಲವನ್ನೂ ಪೂರೈಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.