ಬೆಂಗಳೂರು: ‘ಕಬ್ಬನ್ ಉದ್ಯಾನಕ್ಕೆನಿರ್ವಹಣೆ ಹಾಗೂ ಉನ್ನತೀಕರಣದ ಅಗತ್ಯವಿದೆ. ಉದ್ಯಾನದ ಅಗತ್ಯಗಳ ಬಗ್ಗೆನಾಗರಿಕರೇ ಸಮೀಕ್ಷೆ ನಡೆಸಿ, ಸಲಹೆ ಹಾಗೂ ಸೂಚನೆಗಳನ್ನು ತಿಳಿಸುವುದು ಉತ್ತಮ’ ಎಂದು ಮೇಯರ್ ಎಂ.ಗೌತಮ್ ಕುಮಾರ್ ತಿಳಿಸಿದರು.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ಸ್ಮಾರ್ಟ್ ಸಿಟಿ ಯೋಜನೆಯಡಿ ₹40 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಆರಂಭಗೊಳ್ಳಲಿವೆ. ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳು ಉದ್ಯಾನಕ್ಕೆ ಅಗತ್ಯವಿಲ್ಲ. ಇದು ಸಾರ್ವಜನಿಕರ ತೆರಿಗೆ ಹಣ. ನಾಗರಿಕರೇ ತಮ್ಮ ಅಗತ್ಯಗಳ ಬಗ್ಗೆ ಪಟ್ಟಿ ಮಾಡಿ ವರದಿ ನೀಡಿದರೆ ಕಾಮಗಾರಿ ಕೈಗೊಳ್ಳಲು ಸಹಕಾರಿ’ ಎಂದರು.
ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್,‘ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳು ಕಾಂಕ್ರೀಟುಮುಕ್ತವಾಗಿರಲಿ.
‘ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಉದ್ಯಾನದಲ್ಲಿ ಸಹಾಯವಾಣಿ ಅಗತ್ಯವಿದೆ. ತುರ್ತು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ಅಳವಡಿಸಬೇಕು’ ಎಂದು ಸಂಘದ ಸದಸ್ಯ ಮಜೂಮ್ ಮನವಿ ಮಾಡಿದರು.
ವಿದ್ಯಾರಣ್ಯಪುರ: ಕ್ರೀಡಾ ಸಂಕೀರ್ಣ ಲೋಕಾರ್ಪಣೆ
ಯಲಹಂಕ: ಬಿಬಿಎಂಪಿ ವತಿಯಿಂದ ವಿದ್ಯಾರಣ್ಯಪುರದ ಬಿ.ಇ.ಎಲ್ ಬಡಾವಣೆಯಲ್ಲಿ ನಿರ್ಮಿಸಿರುವ ಕ್ರೀಡಾ ಸಂಕೀರ್ಣವನ್ನು ಶಾಸಕ ಕೃಷ್ಣಬೈರೇಗೌಡ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಕ್ರೀಡಾ ಉತ್ಸವದಲ್ಲಿ ಹ್ಯಾಂಡ್ ಬಾಲ್, ಬ್ಯಾಸ್ಕೆಟ್ ಬಾಲ್, ಫುಟ್ ಬಾಲ್, ಟೇಬಲ್ ಟೆನ್ನಿಸ್, ಟೇಕ್ವಾಂಡೊ, ಕರಾಟೆ, ಸ್ಕೇಟಿಂಗ್, ಈಜು, ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಕ್ರೀಡಾ ಉತ್ಸವದಲ್ಲಿ 1500 ಸ್ಪರ್ಧಿಗಳು ಪಾಲ್ಗೊಂಡರು. ವಿಜೇತರಿಗೆ ₹12 ಲಕ್ಷ ಮೌಲ್ಯದ ಬಹುಮಾನ ವಿತರಿಸಲಾಯಿತು.
ಕೃಷ್ಣಬೈರೇಗೌಡ ಮಾತನಾಡಿ, ‘ಸಾರ್ವಜನಿಕರಿಗೆ ಒಂದೇ ಕಡೆ ಎಲ್ಲಾ ಕ್ರೀಡೆಗಳಲ್ಲಿ ಪಾಲ್ಗೊ ಳ್ಳಲು ಅವಕಾಶವಾಗಬೇಕು ಎಂಬ ಉದ್ದೇಶದಿಂದ 4 ಎಕರೆಯಲ್ಲಿ ₹16 ಕೋಟಿ ವೆಚ್ಚದಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸಮುಚ್ಚಯವನ್ನು ಅಭಿವೃದ್ಧಿಪಡಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಈಜುಕೊಳ, ಬ್ಯಾಸ್ಕೆಟ್ ಬಾಲ್, ಟೆನ್ನಿಸ್ ಕೋರ್ಟ್, ಸ್ಕೇಟಿಂಗ್, ಫುಟ್ ಬಾಲ್ ಆಡಲು ಸೌಕರ್ಯಗಳನ್ನು ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ಕೆಲವೇ ದಿನಗಳಲ್ಲಿ ಮಕ್ಕಳು ಆಟವಾಡಲು ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗುವುದು. ಮೂರು ವರ್ಷದ ಮಗುವಿನಿಂದ 75 ವರ್ಷದ ಹಿರಿಯರ ವರೆಗೆ ಎಲ್ಲರೂ ಒಂದೇ ಜಾಗದಲ್ಲಿ ಆರೋಗ್ಯಕರ ಕ್ರೀಡಾಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಈ ಕ್ರೀಡಾಸಮುಚ್ಚಯವನ್ನು ನಿರ್ಮಿಸಲಾಗಿದೆ ಎಂದರು.
ಮೇಯರ್ ಎಂ.ಗೌತಮ್ ಕುಮಾರ್ ಮಾತನಾಡಿ, ‘ಒಂದೇ ಸೂರಿನಡಿ ಎಲ್ಲಾ ಕ್ರೀಡೆಗಳಿಗೆ ಅವಕಾಶವಿರುವುದು ವಿರಳ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.