ADVERTISEMENT

ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪೂಜೆ ನಡೆಸಿ: ಕ್ರೈಸ್ತರ ಸಂಘದ ಅಧ್ಯಕ್ಷ ಐಸಾಕ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 15:43 IST
Last Updated 5 ಡಿಸೆಂಬರ್ 2025, 15:43 IST
   

ಬೆಂಗಳೂರು: ‘ರಾಜ್ಯದಲ್ಲಿರುವ ಎಲ್ಲ ಚರ್ಚ್‌ಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವುದರ ಜೊತೆಗೆ ಕನ್ನಡದಲ್ಲಿಯೇ ಪೂಜೆ ನಡೆಸಬೇಕು’ ಎಂದು ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಎ. ಐಸಾಕ್ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಚರ್ಚ್‌ಗಳಲ್ಲಿ ಕೊಂಕಣಿ ಭಾಷಿಕ ಗುಂಪುಗಳು ಏಕಪಕ್ಷೀಯವಾಗಿ ಅಧಿಕಾರ ನಡೆಸುತ್ತಿದ್ದು, ಕನ್ನಡ ಕ್ರೈಸ್ತರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 14 ಧರ್ಮ ಕ್ಷೇತ್ರಗಳಿವೆ. ಚಿಕ್ಕಮಗಳೂರು ಹೊರತುಪಡಿಸಿ ಇತರೆ ಚರ್ಚ್‌ಗಳಲ್ಲಿ ಕನ್ನಡಿಗ ಬಿಷಪ್‌ಗಳಿಲ್ಲ. ಕರಾವಳಿ ಭಾಗದಲ್ಲಿ ಕನ್ನಡಿಗ ಬಿಷಪ್‌ಗಳನ್ನು ಬೆಳಸದಂತೆ ತಡೆಯಲಾಗುತ್ತಿದೆ’ ಎಂದು ಆರೋಪಿಸಿದರು. 

‘ಬೆಂಗಳೂರಿನ ಧರ್ಮ ಪ್ರಾಂತ್ಯದ ಆರ್ಚ್‌ ಬಿಷಪ್‌ ಪೀಟರ್‌ ಮಚಾಡೊ ಅವರು ಕನ್ನಡ ಕ್ರೈಸ್ತರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಚರ್ಚ್ ಪ್ರಮುಖ ಹುದ್ದೆಗಳು, ಧರ್ಮಕ್ಷೇತ್ರದ ಆಡಳಿತ, ಆಯೋಗಗಳು, ಸೆಮಿನರಿ ತರಬೇತಿ ಸಂಸ್ಥೆಗಳಲ್ಲಿ ಕರಾವಳಿ ಕೊಂಕಣಿ ವಲಯದ ಹಿಡಿತದಲ್ಲಿವೆ’ ಎಂದು ದೂರಿದರು. 

ADVERTISEMENT

‘ಕಥೋಲಿಕ ಥಿಂಕ್‌ ಟ್ಯಾಂಕ್‌ನ ಅಧ್ಯಕ್ಷ ರಾಯ್‌ ಕಾಸ್ಟೆಲಿನೊ ಅವರು ಸಾರ್ವಜನಿಕವಾಗಿ ನೀಡಿರುವ ಹೇಳಿಕೆಯು ಕನ್ನಡ ಕ್ರೈಸ್ತರ ಭಾವನೆಗಳಿಗೆ ಧಕ್ಕೆ ಆಗಿದೆ. ರಾಜ್ಯದಲ್ಲಿ ಚರ್ಚ್‌ಗಳಲ್ಲಿ ಕರಾವಳಿ ಕೊಂಕಣಿಗರ ಏಕಾಧಿಕಾರಕ್ಕೆ ಅಂತ್ಯ ಹಾಡಬೇಕು. ತಮಿಳುನಾಡು, ತೆಲಂಗಾಣ ರಾಜ್ಯದ ಮಾದರಿಯಲ್ಲಿ ಕರ್ನಾಟಕದ ಚರ್ಚ್‌ಗಳಲ್ಲಿ ಸ್ಥಳೀಯ ಕನ್ನಡ ಬಿಷಪ್‌ಗಳಿಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು. 

ಅಂತೋಣಿ ರಾಜು ಸಿ., ಖಜಾಂಚಿ ಜಾರ್ಜ್ ಕುಮಾರ್ ವೈ., ಕನ್ನಡ ಹೋರಾಟಗಾರರಾದ ಚಂದ್ರಶೇಖರ್, ವ.ಚ. ಚನ್ನೇಗೌಡ ಸುದ್ದಿಗೋಷ್ಠಿಯಲ್ಲಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.