ADVERTISEMENT

ಇಕ್ಕಟ್ಟಿನಲ್ಲಿ ಕಾಂಗ್ರೆಸ್‌ ಮುಖಂಡರು?

ಡಿಕೆಶಿಯಿಂದ ಉಡುಗೊರೆ ಪಡೆದವರಿಗೆ ನಡುಕ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 19:16 IST
Last Updated 4 ಸೆಪ್ಟೆಂಬರ್ 2019, 19:16 IST

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಯಾರ್‍ಯಾರಿಗೆ ಹಣ ನೀಡಿದ್ದಾರೆಂಬ ಬಗ್ಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದರಿಂದಾಗಿ ಕಾಂಗ್ರೆಸ್‌ ನಾಯಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕಾಂಗ್ರೆಸ್‌ ನಾಯಕರ ಹೆಸರುಗಳನ್ನು ಹೋಲುವ ವ್ಯಕ್ತಿಗಳೂ ಸೇರಿದಂತೆ ಅನೇಕರಿಗೆ ಶಿವಕುಮಾರ್‌ 2014– 16ರ ಮಧ್ಯೆ ₹ 23 ಕೋಟಿ ಪಾವತಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿತ್ತು.

2017ರ ಆಗಸ್ಟ್‌ 2ರಂದುಶಿವಕುಮಾರರ ಸದಾಶಿವನಗರ ಮನೆ ಮೇಲೆ ದಾಳಿ ನಡೆಸಿದ ಐ.ಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. Dks/Ps/Ls/s-1 ಫೋಲ್ಡರ್‌ನ ಪುಟ ಸಂಖ್ಯೆ 72– 73ರಲ್ಲಿ ಯಾರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿ ಇದೆ. ಸದ್ಯ ದಾಖಲೆಗಳು ಇ.ಡಿ ಅಧಿಕಾರಿಗಳ ಕೈಸೇರಿದ್ದು, ಮಾಜಿ ಸಚಿವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ADVERTISEMENT

ತಾವು ಯಾರಿಗೂ ಹಣ ಪಾವತಿಸಿಲ್ಲ ಎಂದುಐ.ಟಿ ವಿಚಾರಣೆ ವೇಳೆ ಶಿವಕುಮಾರ್‌ ಹೇಳಿದ್ದರು. ಅಧಿಕಾರಿಗಳು ಜಪ್ತಿ ಮಾಡಿರುವ ದಾಖಲೆಗಳಲ್ಲಿನ ಕೈಬರಹ ತಮ್ಮದಲ್ಲ ಎಂದೂ ಪ್ರತಿಪಾದಿಸಿದ್ದರು. ಆದರೆ, ಕನಕಪುರದ ಶಾಸಕರು ಇ.ಡಿ ವಶದಲ್ಲಿರುವುದರಿಂದ ಒತ್ತಡಕ್ಕೆ ಒಳಗಾಗಿ ವಾಸ್ತವ ಸಂಗತಿಗಳನ್ನು ಬಹಿರಂಗ ಪಡಿಸಬಹುದೆಂದು ನಿರೀಕ್ಷಿಸಲಾಗಿದೆ.

ಫೋಲ್ಡರ್‌ನಲ್ಲಿ ಕೊಂಡಯ್ಯ, ಮುನಿಯಪ್ಪ, ಗುಲಾಂ, ದೆಹಲಿ ರಾಜೇಂದ್ರ ಎನ್ನುವ ಹೆಸರುಗಳಿದ್ದವು. ಇವು ಕಾಂಗ್ರೆಸ್‌ ನಾಯಕರ ಹೆಸರುಗಳೇ ಅಥವಾ ಬೇರೆಯವರದ್ದೇ ಎಂದು ಸ್ಪಷ್ಟವಾಗಿರಲಿಲ್ಲ. ಡಿಸೆಂಬರ್‌ 15ರಂದು ಕೊಂಡಯ್ಯ₹ 25 ಲಕ್ಷ, ಮುನಿಯಪ್ಪ ₹25 ಲಕ್ಷ, ಜನವರಿ 19ರಂದು ಲಿಂಗಪ್ಪ ₹ 20 ಲಕ್ಷ, ವಿಜಯ್‌ ಮುಳಗುಂದ್‌ ₹ 2 ಕೋಟಿ, ಗುಲಾಂ ₹ 1 ಕೋಟಿ, ರಾಜೇಂದ್ರ ₹ 2 ಕೋಟಿ ಎಂಬ ಪ್ರಸ್ತಾಪವಿದೆ.

ಇದೇ ಫೋಲ್ಡರ್‌ನ ಒಂದನೇ ಪುಟದಲ್ಲಿ ಬೇರೆ ಬೇರೆ ಸ್ಥಳಗಳ ಮುಂದೆ ನಮೂದಿಸಿರುವ ₹ 43.18 ಕೋಟಿ ಠೇವಣಿ ಕುರಿತ ಉಲ್ಲೇಖವಿದೆ. ಇದನ್ನು ಶಿವಕುಮಾರ್‌ ಒಪ್ಪಿಕೊಂಡಿಲ್ಲ.ಮನೆ ₹7.42 ಕೋಟಿ, ದೆಹಲಿಯ ಮನೆ ₹7.45 ಕೋಟಿ, ಫ್ಲ್ಯಾಟ್ಸ್‌ ಡಿಕೆಎಸ್‌ ₹10.85 ಕೋಟಿ, ಶೋಭಾ ಲೇಔಟ್‌ ₹1.78 ಕೋಟಿ, ದವನಂ ₹ 9.78 ಕೋಟಿ ಎಂಬ ವಿವರಗಳೂ ದಾಖಲೆಗಳಲ್ಲಿವೆ. ಶಿವಕುಮಾರ್‌ ಅವರ ಕುಟುಂಬದ ಸದಸ್ಯರ ಆಸ್ತಿ, ಆದಾಯ ಮೂಲ, ವಿವಿಧ ಕಂಪನಿಗಳಲ್ಲಿರುವ ಪಾಲುದಾರಿಕೆ, ವಿದೇಶಿ ಹೂಡಿಕೆ ಕುರಿತು ಇ.ಡಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯಿದೆ. ಶೋಭಾ ಡೆವಲಪರ್ಸ್‌, ಪೂರ್ವಂಕರ, ಸಲಪುರಿಯಾ ಒಳಗೊಂಡಂತೆ ವಿವಿಧ ರಿಯಲ್‌ ಎಸ್ಟೇಟ್‌ ಕಂಪನಿಗಳ ಜೊತೆಗಿನ ವ್ಯವಹಾರ ಕುರಿತು ವಿಚಾರಣೆ ನಡೆಯಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.