ADVERTISEMENT

ಅನುದಾನ ಕಡಿತ: ಕಾಂಗ್ರೆಸ್ ಪ್ರತಿಭಟನೆ ಇಂದು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 19:35 IST
Last Updated 25 ಸೆಪ್ಟೆಂಬರ್ 2019, 19:35 IST

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಿದ್ದ ಅನುದಾನವನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಕಡಿತ ಮಾಡಿರುವುದನ್ನು ವಿರೋಧಿಸಿ ಟೌನ್‌ಹಾಲ್ ಎದುರು ಗುರುವಾರ ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಬಿಜೆಪಿ ಸರ್ಕಾರ ಬಂದ ನಂತರ ಅಭಿವೃದ್ಧಿ ಸಲುವಾಗಿ ನೀಡಿದ್ದ ಅನುದಾನವನ್ನು ಕಡಿತ ಮಾಡಿದ್ದು, ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಹಂಚಿಕೆ ಮಾಡಲಾಗಿದೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚುವರಿ ಹಣ ನೀಡಲಿ. ಆದರೆ ನಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದ ಅನುದಾನ ಕಿತ್ತುಕೊಳ್ಳಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ಬಿ.ಟಿ.ಎಂ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ, ಮೇಲುಸೇತುವೆ, ಕೆರೆ ಅಭಿವೃದ್ಧಿ, ಉದ್ಯಾನ, ಒಳಚರಂಡಿ ನಿರ್ಮಾಣ, ಬಡವರಿಗೆ ಮನೆಗಳನ್ನು ನೀಡುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹387 ಕೋಟಿ ಹಣ ಮಂಜೂರು ಮಾಡಲಾಗಿತ್ತು. ಈಗ ₹259 ಕೋಟಿಯನ್ನು ಕಡಿತ ಮಾಡಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಶಾಸಕಿ ಸೌಮ್ಯಾ ರೆಡ್ಡಿ, ಬಿಟಿಎಂ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಟೀಕೆ: ಅನುದಾನ ಬಿಡುಗಡೆಯಲ್ಲಿ ಆಗಿರುವ ತಾರತಮ್ಯದ ವಿರುದ್ಧ ಶಾಸಕ ರಾಮಲಿಂಗಾರೆಡ್ಡಿ ಪ್ರತಿಭಟನೆಗೆ ಮುಂದಾಗಿರುವುದನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ ಟೀಕಿಸಿದ್ದಾರೆ.

‘ಬಿಟಿಎಂ ಕ್ಷೇತ್ರದ ಪ್ರಮುಖ ಭಾಗ ಪದೇ ಪದೇ ಪ್ರವಾಹಕ್ಕೆ ಸಿಲುಕಿ ಆಸ್ತಿಪಾಸ್ತಿಗೆ ಹಾನಿಯಾದಾಗ, ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಾಗ, ವೈಟ್ ಟಾಪಿಂಗ್ ಹಗರಣ, ಉಕ್ಕಿನ ಸೇತುವೆಗಾಗಿ 2,224 ಮರಗಳನ್ನು ಕತ್ತರಿಸಲು ಪ್ರಸ್ತಾಪಿಸಿದಾಗ ಅವರು ಪ್ರತಿಭಟಿಸಲಿಲ್ಲ. ಈಗ ಕೇವಲ ತಮ್ಮ ರಾಜಕೀಯ ಹಿತಾಸಕ್ತಿಗಾಗಿ, ಗುತ್ತಿಗೆದಾರರ ಪರವಾಗಿ ಪ್ರತಿಭಟಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.