ADVERTISEMENT

‘ಕೇವಲ ವ್ಯಕ್ತಿಯೊಬ್ಬರಿಂದ ಕಾಂಗ್ರೆಸ್ ಪಕ್ಷವಲ್ಲ’

ಹೊಸಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಪ್ರಚಾರ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 20:08 IST
Last Updated 1 ಅಕ್ಟೋಬರ್ 2019, 20:08 IST
ಹೊಸಕೋಟೆ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ನ ಸಂಭಾವ್ಯ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ಹೊಸಕೋಟೆ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ನ ಸಂಭಾವ್ಯ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು   

ಹೊಸಕೋಟೆ: ‘ಸ್ವಂತ ಇಚ್ಛೆಯಿಂದ ಹೊಸಕೋಟೆ ವಿಧಾನಸಬಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಜನಸೇವೆ ಮಾಡುವ ಉದ್ದೇಶವನ್ನು ಹೊಂದಿದ್ದು ಅದಕ್ಕೇ ಆದ್ಯತೆ ಕೊಡುವೆ’ ಎಂದು ಇಲ್ಲಿನ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಪದ್ಮಾವತಿ ಸುರೇಶ್ ತಿಳಿಸಿದರು.

ಅವರು ಸೋಮವಾರ ನಗರದ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಾಲಯ, ಖಿಲ್ಲೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ಮಾತನಾಡಿ, ‘ಕಾಂಗ್ರೆಸ್ ಪಕ್ಷದಿಂದ ವ್ಯಕ್ತಿಯೇ ಹೊರತು ಕೇವಲ ವ್ಯಕ್ತಿಯೊಬ್ಬರಿಂದ ಕಾಂಗ್ರೆಸ್ ಪಕ್ಷವಲ್ಲ’ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರಿಗೆ ಟಾಂಗ್ ನೀಡಿದರು. ‘ನಾನು ಇದೇ ತಾಲ್ಲೂಕಿಗೆ ಸೇರಿದವನು. ನನ್ನ ಅಜ್ಜಿಯ ಊರು ಹೊಸಕೋಟೆ. ಪಕ್ಷದ ಅದೇಶದಂತೆ ಮುಂದಿನ ಉಪಚುನಾವಣೆಯಲ್ಲಿ ಪತ್ನಿ ಪದ್ಮಾವತಿ ಕಣಕ್ಕಿಳಿಯಲಿದ್ದು ಪಕ್ಷದ ಸಂಘಟನೆಗೆ ತಾಲ್ಲೂಕಿನ ಮುಖಂಡರು, ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ’ ಎಂದರು.

ADVERTISEMENT

ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರ ಅಣ್ಣ ಪಿಳ್ಳಪ್ಪ ಮಾತನಾಡಿ, ‘ತಮ್ಮನನ್ನು ಮೊದಲ ಬಾರಿಗೆ ತಾಲ್ಲೂಕಿನಾದ್ಯಂತ ಓಡಾಡಿ ಗೆಲ್ಲಿಸಿದೆ. ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಮೂರು ಬಾರಿ ನಾನು ಗೆದ್ದಿದ್ದ ಕ್ಷೇತ್ರದಲ್ಲಿ ನನಗೆ ಮೋಸಮಾಡಿ ತನ್ನ ಮಗನನ್ನು ನಿಲ್ಲಿಸಿದ. ಆಗಲೂ ಪಕ್ಷದ ಆದೇಶದಂತೆ ನಾನು ಅವರ ಪರವಾಗಿ ಕೆಲಸ ಮಾಡಿದೆ. ನನಗೆ ಮೋಸ ಮಾಡಿದ್ದಾರೆ. ರಾಜಕೀಯವಾಗಿ ಬೆಳೆಸಿದ ಪಕ್ಷಕ್ಕೇ ಮೋಸ ಮಾಡಿದ್ದು ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕೋರಿದರು.

ನಗರದ ಮಿನಿ ವಿಧಾನಸೌದದ ಬಳಿಯಿರುವ ಅಂಬೇಡ್ಕರ್ ಪ್ರತಿಮೆ, ಬಸವೇಶ್ವರ ಪ್ರತಿಮೆ, ಕೆಂಪೇಗೌಡರ ಪ್ರತಿಮೆ ಹಾಗೂ ಕುರುಬರ ಪೇಟೆಯಲ್ಲಿರುವ ಕನಕದಾಸರ ಪುತ್ಥಳಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ನಗರದಲ್ಲಿರುವ ಪಕ್ಷದ ಹಿರಿಯ ಕಾರ್ಯಕರ್ತರ ಮನೆಗಳಿಗೆ ಭೇಟಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.