ADVERTISEMENT

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ: ರಾಜ್ಯ ಸರ್ಕಾರದ ವಿರುದ್ಧ ‘ಕೈ’ ನಾಯಕರ ವಾಗ್ದಾಳಿ

ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 7:34 IST
Last Updated 5 ಜುಲೈ 2022, 7:34 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌    

ಬೆಂಗಳೂರು: ‘ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ನೈತಿಕತೆ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ರಾಜೀನಾಮೆ ಕೊಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರೆ, ‘ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಬ್ಬರೂ ಜಂಟಿಯಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮದಿಂದಾಗಿ ಇಡೀ ಭಾರತದ ಇತಿಹಾಸದಲ್ಲಿ ರಾಜ್ಯಕ್ಕೆ ಕಪ್ಪು ಚುಕ್ಕೆ ಬಂದಿದೆ. ಇದರಿಂದಾಗಿ ಕರ್ನಾಟಕದ ಆಡಳಿತ, ಗೌರವಕ್ಕೆ ಮಸಿ ಬಳಿದಂತಾಗಿದೆ. ನ್ಯಾಯಾಲಯ ಸಾಮಾನ್ಯ ಜನರ ರಕ್ಷಣೆಗೆ ಬಂದಿದೆ. ಆದರೆ, ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ನ್ಯಾಯಾಧೀಶರ ಸ್ಥಾನಕ್ಕೆ ಕಂಟಕ ಬರುವ ರೀತಿ ನ್ಯಾಯಾಧೀಶರು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರು ಅಧಿಕಾರಿಗಳ ಬಂಧನವಾಗಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ADVERTISEMENT

‘ಉಪ್ಪಿನ ಅಂಗಡಿ ತೆರೆದವರು ಯಾರು? ಸರ್ಕಾರ ಇದರಲ್ಲಿ ಸಂಪೂರ್ಣ ಶಾಮೀಲಾಗಿದೆ. ಉಪ್ಪು ಖರೀದಿಸಿದವರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ದೊಡ್ಡ ದೊಡ್ಡವರನ್ನು ಹಾಗೇ ಬಿಟ್ಟಿದ್ದಾರೆ. ದೊಡ್ಡ ಅಧಿಕಾರಿಯನ್ನು ಬಂಧಿಸಿ ಅರ್ಧ ಗಂಟೆ ಮಾತ್ರ ವಿಚಾರಣೆ ನಡೆಸಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ನಮ್ಮನ್ನು ಗಂಟೆಗಟ್ಟಲೆ‌ ಕೂರಿಸಿಕೊಳ್ಳುತ್ತಾರೆ. ಇವರನ್ನು ಯಾಕೆ ಕಡಿಮೆ ಅವಧಿ ವಿಚಾರಣೆ ಮಾಡಿದ್ದಾರೆ?’ ಎಂದು ವಾಗ್ದಾಳಿ ನಡೆಸಿದರು.

‘ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಈ ಹಿಂದೆ ಇಡಿ ಅಧಿಕಾರಿಗಳು 50 ಗಂಟೆ ವಿಚಾರಣೆ ನಡೆಸಿದ್ದರು. ಆದರೆ, ಈಗ ಬಂಧಿಸಿರುವ ಅಧಿಕಾರಿ ವಿಚಾರವಾಗಿ ಯಾಕೆ ಹೀಗೆ? ಹಾದಿ ತಪ್ಪಿಸಲು, ಕಣ್ಣೊರೆಸಲು ಏನೇನೋ ಮಾಡುತ್ತಿದ್ದಾರೆ. ಎಷ್ಟೋ ಜನ ಕೆಲಸಕ್ಕಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಸಮಗ್ರ ವಿಚಾರಣೆ ನಡೆಸದೆ ವೈದ್ಯ ಪರೀಕ್ಷೆಗೆ ಕಳುಹಿಸಿದ್ದು ಗೊತ್ತಿಲ್ಲವೇ‘ ಎಂದೂ ಹೇಳಿದರು.

‘ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಗೃಹ ಸಚಿವರು ರಾಜೀನಾಮೆ ನೀಡಬೇಕು. ಗೃಹ ಸಚಿವರು ಏನೂ ನಡೆದೇ ಇಲ್ಲ ಎಂದು ಸುಳ್ಳು ಹೇಳಿದ್ದಾರೆ. ಮೊದಲು ಇವರ ವಿರುದ್ಧ ದೂರು ದಾಖಲಿಸಬೇಕು. ಅಕ್ರಮ ಪ್ರಕರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಬೆಳಕು ಚೆಲ್ಲಿದಾಗ ನಾಲ್ಕು ಬಾರಿ ನೋಟಿಸ್ ಕೊಟ್ಟು ಹೆದರಿಸಿದರು‘ ಎಂದರು.

ಗೃಹ ಸಚಿವರು ಈಗ ಏನು ಹೇಳುತ್ತಾರೆ– ಸಿದ್ದರಾಮಯ್ಯ

‘ಪಿಎಸ್ಐ ಅಕ್ರಮ‌ ನೇಮಕಾತಿಯಲ್ಲಿ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ಬಂಧಿಸಲಾಗಿದೆ. ಸೇವೆಯಿಂದಲೂ ಅಮಾನತುಗೊಳಿಸಲಾಗಿದೆ. ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ನಾವು ಪ್ರಸ್ತಾಪಿಸಿದ್ದೆವು. ಆಗ, ಈ ನೇಮಕಾತಿಯಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ ಎಂದು ಮೈಮೇಲೆ ಬಿದ್ದಿದ್ದರು. ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಗೃಹ ಸಚಿವರು ವೀರಾವೇಶದಿಂದ ಉತ್ತರಿಸಿದ್ದರು. ಈಗ ಅದೇ ಹಗರಣದಲ್ಲಿ ನೇಮಕಾತಿ ಉಸ್ತುವಾರಿ ಹೊತ್ತಿದ್ದ, ಅವರದೇ ಇಲಾಖೆಯ ಅಧಿಕಾರಿಯ ಬಂಧನವಾಗಿದೆ. ಈ ಬಗ್ಗೆ ಸಚಿವರು ಏನು ಹೇಳುತ್ತಾರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಗೃಹ ಇಲಾಖೆಯಲ್ಲಿ ನಡೆದಿರುವುದನ್ನು ಅವರು ಸಾರಾಸಗಟಾಗಿ ತಳ್ಳಿ ಹಾಕಿದವರು. ಈಗ ಎಡಿಜಿಪಿಯನ್ನು ಬಂಧಿಸಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಸದನದಲ್ಲಿ ಸುಳ್ಳು ಹೇಳಿದ್ದ ಗೃಹ ಸಚಿವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವೇ? ಅನೇಕ ಬಾರಿ ಅವರು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇಂಥವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಟ್ಟುಕೊಂಡು ಉತ್ತರ ಕೊಡಿಸುತ್ತಿದ್ದಾರೆ. ಅಸಂಬದ್ಧವಾದ, ಸುಳ್ಳು ಉತ್ತರ ಕೊಡಿಸಿದ್ದಾರೆ’ ಎಂದು ಕಿಡಿಕಾರಿದರು.

‘ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಹೊರಟಿತ್ತು. ಏಪ್ರಿಲ್ ತಿಂಗಳಿನಲ್ಲಿ ಸಿಐಡಿ ತನಿಖೆಗೆ ವಹಿಸಿತ್ತು. ಆದರೆ, ನಾವು ಮಾರ್ಚ್ ತಿಂಗಳಿನಲ್ಲೇ ತನಿಖೆಗೆ ಒತ್ತಾಯಿಸಿದ್ದೆವು. ದೊಡ್ಡವರ ಪಾತ್ರ ಇರುವ ಕಾರಣ ಅಂಥವರನ್ನು ಬಂಧಿವುದಿಲ್ಲ ಎಂದೂ ಹೇಳಿದ್ದೆ. ಹೀಗಾಗಿ ನ್ಯಾಯಾಂಗ ತನಿಖೆಗೆ‌ ಒತ್ತಾಯಿಸಿದ್ದೆ. ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪತ್ರ ಕೂಡ ಬರೆದಿದ್ದೆ. ಅದನ್ನು ಸರ್ಕಾರ ಮಾಡದೆ ಸಿಐಡಿ ತನಿಖೆಗೆ ವಹಿಸಿತ್ತು. ಈಗ ಸಿಐಡಿ ಪೋಲಿಸರು ಅಧಿಕಾರಿಯನ್ನು ಬಂಧಿಸಿದ್ದಾರೆ. ಅಶ್ವತ್ಥನಾರಾಯಣ್ ಕಡೆಯ ಐದು ಮಂದಿ ಅಕ್ರಮವಾಗಿ ಆಯ್ಕೆಯಾಗಿದ್ದರು. ಈಗ ಸಚಿವರ ವಿರುದ್ಧ ಸಿಐಡಿ ತನಿಖೆ ನಡೆಸುತ್ತಾ? ಒಬ್ಬೊಬ್ಬರಿಂದ ₹ 70 ಲಕ್ಷದಿಂದ ₹ 1 ಕೋಟಿಯವರೆಗೂ ವಸೂಲಿಯಾಗಿದೆ. ಯಾರ‍್ಯಾರ ಜೇಬಿಗೆ ಈ ಹಣ ಹೋಗಿದೆ? ಯಾವ ಸಚಿವರಿಗೆ ಹೋಗಿದೆ? ಮುಖ್ಯಮಂತ್ರಿಗೆ ಹೋಗಿದೆಯಾ ಎಂಬುದು ಗೊತ್ತಾಗಬೇಕಲ್ಲವೇ’ ಎಂದರು.

‘ಈ ಹಗರಣದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಇದರ ಬಗ್ಗೆ ನಾಡಿನ ಜನರಿಗೆ ಗೊತ್ತಾಗಬೇಕಲ್ಲವೇ? ಇವರನ್ನೆಲ್ಲಾ ರಕ್ಷಣೆ ಮಾಡುತ್ತಿರುವವರು ಯಾರು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ವರ್ಗಾವಣೆ ಮಾಡುವುದಾಗಿ ನ್ಯಾಯಾಧೀಶರನ್ನೇ ಹೆದರಿಸಿದ್ದಾರೆ. ನ್ಯಾಯಾಧೀಶರಿಗೇ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಲಂಚಾವತಾರ ಮುಗಿಲು ಮುಟ್ಟಿದೆ. ಎಸಿಬಿ ಆ್ಯಂಟಿ ಕರೆಪ್ಷನ್ ಬ್ಯೂರೋ ಅಲ್ಲ, ಕಲೆಕ್ಷನ್ ಬ್ಯೂರೋ. ಅದನ್ನು ಹುಟ್ಟು ಹಾಕಿದ್ದೇ ತಪ್ಪಾ? ಭ್ರಷ್ಟಾಚಾರದ ನಿಯಂತ್ರಣಕ್ಕೆ ಹುಟ್ಟು ಹಾಕಿದ್ದು. ಹಾಗಂತ ವ್ಯವಸ್ಥೆಯೇ ಭ್ರಷ್ಟಾಚಾರದ ರೂಪ ಪಡೆದರೆ ಹೇಗೆ? ಎಸಿಬಿ ಹುಟ್ಟು ಹಾಕಿದ್ದು ನಾವೇ? ಇದು ನಮ್ಮ ಕೂಸು. ಅವರ ಕೂಸು ಎಂದು ಅಲ್ಲ. ಇದನ್ನು ಹುಟ್ಟು ಹಾಕಿರುವುದು ಭ್ರಷ್ಟಾಚಾರ ಕಡಿಮೆ ಮಾಡಲಿ. ಭ್ರಷ್ಟರಿಗೆ ಶಿಕ್ಷೆಯಾಗಲಿ ಎಂಬ ಕಾರಣಕ್ಕೆ’ ಎಂದರು.

‘ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಇದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಅವರ ಮೇಲೂ ಆರೋಪಗಳು ಕೇಳಿಬಂದಿವೆ. ಇನ್ನೂ ಬಹಳ ಜನರು ಇದ್ದಾರೆ. ಅಶ್ವತ್ಥನಾರಾಯಣ್, ಅಧಿಕಾರಿಗಳೂ ಇದಾರೆ. ಅವರು ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅವರ ಕಾಲ, ಇವರ ಕಾಲ ಎಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಯಾವ ಪ್ರಕರಣದಲ್ಲಿ ಎಸಿಬಿ ದಾಳಿ ನಡೆದಿದೆಯೋ ಗೊತ್ತಿಲ್ಲ: ಶಾಸಕ ಜಮೀರ್ ಅಹಮ್ಮದ್ ನಿವಾಸದ ಮೇಲಿನ ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಯಾವ ಕಾರಣಕ್ಕೆ ಜಮೀರ್ ಮನೆ ಮೇಲೆ ದಾಳಿ ನಡೆದಿದೆಯೋ ಗೊತ್ತಿಲ್ಲ. ಯಾವ ಕೇಸ್ ಮೇಲೆ ದಾಳಿ ನಡೆದಿದೆಯೋ ಗೊತ್ತಿಲ್ಲ. ಹಾದಿ ತಪ್ಪಿಸಲು ದಾಳಿ ನಡೆಸಿರಬಹುದೇನೋ? ಇದುವರೆಗೂ ಎಸಿಬಿ ದಾಳಿ ನಡೆಸಿರುವುದು ತಿಳಿದಿಲ್ಲ. ಎಸಿಬಿ ನಿಯಂತ್ರಣ ಇರುವುದೇ ಮುಖ್ಯಮಂತ್ರಿ ಅಡಿಯಲ್ಲಿ. ಜಮೀರ್ ಒಬ್ಬರೇ ಅಲ್ಲ. ಎಲ್ಲರೂ ನನಗೆ ಆಪ್ತರೇ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಶಾಸಕ ಪ್ರಿಯಾಂಕ್ ಖರ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.