ADVERTISEMENT

ಗುಂಡಿಗಳು ಅಸಂಖ್ಯ, ಅನುದಾನ ನೀಡಿದ್ದೆಷ್ಟು?: ರಾಮಲಿಂಗಾರೆಡ್ಡಿ ಪ್ರಶ್ನೆ

ಬಿಜೆಪಿ ಸರ್ಕಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 22:00 IST
Last Updated 28 ಅಕ್ಟೋಬರ್ 2021, 22:00 IST

ಬೆಂಗಳೂರು: 'ರಸ್ತೆಗಳಲ್ಲಿನ ಗುಂಡಿಗಳು ಲೆಕ್ಕಕ್ಕೆ ಸಿಗದಷ್ಟು ದು:ಸ್ಥಿತಿಗೆ ನಗರ ತಲುಪಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಗರದ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಮಾಹಿತಿ ನೀಡಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘2008ರಿಂದ 2013ರವರೆಗೆ ಅಧಿಕಾರ ಮಾಡಿದ್ದ ಬಿಜೆಪಿ, ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗುವಂತೆ ಮಾಡಿ
ತ್ತು. 2013ರಲ್ಲಿ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಾನು ಬೆಂಗಳೂರು ಉಸ್ತುವಾರಿಯಾದ ಬಳಿಕ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷ 5 ತಿಂಗಳಾಗಿವೆ. ಈ ಅವಧಿಯಲ್ಲಿ ಅಭಿವೃದ್ಧಿಯನ್ನೇ ಸರ್ಕಾರ ನಿರ್ಲಕ್ಷಿಸಿದೆ. ನಗರದ ರಸ್ತೆ ಸ್ಥಿತಿ ಕಂಡು ಹೈಕೋರ್ಟ್ ಛೀಮಾರಿ ಹಾಕುವಂತಾಗಿದೆ. ನಮ್ಮ ಸರ್ಕಾರ ಇದ್ದಾಗಲೂ ರಸ್ತೆಗುಂಡಿಗಳು ಇದ್ದವು. ಆದರೆ, ಹೈಕೋರ್ಟ್‌ನಿಂದ ಈ ರೀತಿ ಛೀಮಾರಿ ಹಾಕಿಸಿಕೊಳ್ಳುವಷ್ಟು ದುಸ್ಥಿತಿಗೆ ತಲುಪಿರಲಿಲ್ಲ’ ಎಂದರು.

ADVERTISEMENT

‘ಸಚಿವ ಆರ್. ಅಶೋಕ, ಪಾಲಿಕೆ ಆಯುಕ್ತರು, ಸೇರಿದಂತೆ ಹಲವರು ಗುಂಡಿ ಮುಚ್ಚಲು ಗಡುವು ಕೊಟ್ಟರೂ ಇದುವರೆಗೂ ಗುಂಡಿಗಳು ಮುಚ್ಚಿಲ್ಲ. ಬೆಂಗಳೂರಿನಲ್ಲಿ 7 ಸಚಿವರಿದ್ದಾರೆ. ಅವರ ಕೈಯಲ್ಲಿ ಈ ನಗರದ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳೇ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ ಜವಾಬ್ದಾರಿ ತಾವೇ ಇಟ್ಟುಕೊಂಡ ಮೇಲೆ ಅವರು ನಗರ ಸಂಚಾರ ಕೈಗೊಳ್ಳಬೇಕು. ಎಲ್ಲಿ ಏನೇನು ಸಮಸ್ಯೆ ಇದೆ ಎಂದು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ₹6 ಸಾವಿರ ಕೋಟಿ ಹಾಗೂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ₹1 ಸಾವಿರ ಕೋಟಿ ಕೊಟ್ಟಿದೆ. 2019-20 ಸಾಲಿನಲ್ಲಿ ಬಿಬಿಎಂಪಿಯ 198 ವಾರ್ಡ್‌ಗಳಿಗೆ ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ. 2020-21ರಲ್ಲಿ ಬಿಬಿಎಂಪಿಯಿಂದ ಪ್ರತಿ ವಾರ್ಡ್‌ಗೆ ₹60 ಲಕ್ಷ ಘೋಷಿಸಿದ್ದು, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಅನುದಾನ ನೀಡದೇ ರಸ್ತೆ ಗುಂಡಿ ಮುಚ್ಚಿ ಎಂದರೆ ಹೇಗೆ ಮುಚ್ಚಲು ಸಾಧ್ಯ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.