ADVERTISEMENT

ಗೋಹತ್ಯೆ ನಿಷೇಧ: ಕಾಂಗ್ರೆಸ್‌ನಿಂದ ಸುಳ್ಳು ಆರೋಪ: ಪ್ರಭು ಚವ್ಹಾಣ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 8:57 IST
Last Updated 3 ಡಿಸೆಂಬರ್ 2022, 8:57 IST
   

ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ ತಿದ್ದುಪಡಿಯಿಂದ ಯಾರಿಗೂ ತೊಂದರೆ, ನಷ್ಟವಾಗಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಎಸ್. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿತ್ತು. ಅದರಲ್ಲಿ ದಂಡನಾ ಕ್ರಮಗಳನ್ನು ಮಾತ್ರ ನಮ್ಮ ಸರ್ಕಾರದ ‌ಅವಧಿಯಲ್ಲಿ ಹೆಚ್ಚಿಸಲಾಗಿದೆ. ಈ ತಿದ್ದುಪಡಿಯ ಪರಿಣಾಮವಾಗಿ ರಾಜ್ಯದಲ್ಲಿ ಗೋವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ' ಎಂದರು.

ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆ ನೀಡುವಂತೆ ಸರ್ಕಾರಿ ನೌಕರರ ಮೇಲೆ ಯಾರೂ ಒತ್ತಡ ಹೇರಿಲ್ಲ. ನೌಕರರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದರು.

ADVERTISEMENT

ಪುಣ್ಯಕೋಟಿ ದತ್ತು ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈವರೆಗೆ 2,665 ಜನರು ₹ 21.45. ಲಕ್ಷ ದೇಣಿಗೆ ನೀಡಿದ್ದಾರೆ ಎಂದರು.

'ಜೆಡಿಎಸ್ ಅಧಿಕಾರಕ್ಕೆ ಅಧಿಕಾರಕ್ಕೆ‌ ಬಂದರೆ ಮುಸ್ಲಿಮರಿಗೆ ಉಪ‌ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಆ‌ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ವಿಚಲಿತರಾಗಿದ್ದಾರೆ. ಅದೇ ಕಾರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ವಾಪಸ್ ಪಡೆಯುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ತಿದ್ದುಪಡಿ ವಾಪಸ್ ಪಡೆಯಲು ಇವರು ಯಾರು' ಎಂದು ಪ್ರಶ್ನಿಸಿದರು.

ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಪಶು ಚಿಕಿತ್ಸಾಲಯಗಳ ಆರಂಭ, ಸಂಚಾರಿ ಪಶು ಚಿಕಿತ್ಸಾಲಯಗಳ ಸೇವೆ ಒದಗಿಸುವುದಕ್ಕೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಗೋಶಾಲೆಗಳಲ್ಲಿ‌ ಪಶು ಆಹಾರ ಪೂರೈಕೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದವರು ಮಾಡಿರುವ ಆರೋಪಗಳಿಗೆ ಆಧಾರವಿಲ್ಲ. ಮೇವು ಖರೀದಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಇಲ್ಲ ಎಂದು ಚವ್ಹಾಣ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.