ADVERTISEMENT

ಶ್ರೇಷ್ಠತೆಗೆ ಅಡ್ಡಿ; ಜಾತಿ, ಧರ್ಮ ಸಂಘರ್ಷಕ್ಕೆ ದಾರಿ: ಶಾಸಕ ರಿಜ್ವಾನ್‌ ಅರ್ಷದ್

ಸಂವಿಧಾನ ಅಭಿಯಾನೋತ್ಸವ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 23:19 IST
Last Updated 18 ಜನವರಿ 2023, 23:19 IST
ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಅಭಿಯಾನೋತ್ಸವವನ್ನು ಶಾಸಕ ಜಮೀರ್‌ ಅಹಮದ್‌ ಖಾನ್ ಉದ್ಘಾಟಿಸಿದರು. ಟಿ.ವೆಂಕಟರಮಣಯ್ಯ, ವಡ್ಡಗೆರೆ ನಾಗರಾಜಯ್ಯ, ಮಾ.ಮುನಿರಾಜು, ಜಿ.ಮಂಜನಾಥ್‌ ಇದ್ದರು –ಪ್ರಜಾವಾಣಿ ಚಿತ್ರ.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಅಭಿಯಾನೋತ್ಸವವನ್ನು ಶಾಸಕ ಜಮೀರ್‌ ಅಹಮದ್‌ ಖಾನ್ ಉದ್ಘಾಟಿಸಿದರು. ಟಿ.ವೆಂಕಟರಮಣಯ್ಯ, ವಡ್ಡಗೆರೆ ನಾಗರಾಜಯ್ಯ, ಮಾ.ಮುನಿರಾಜು, ಜಿ.ಮಂಜನಾಥ್‌ ಇದ್ದರು –ಪ್ರಜಾವಾಣಿ ಚಿತ್ರ.   

ಬೆಂಗಳೂರು: ಹುಟ್ಟಿನ ಕಾರಣವನ್ನು ಮುಂದಿಟ್ಟುಕೊಂಡು ವರ್ಗದ ಶ್ರೇಷ್ಠತೆಯನ್ನು ನಿರ್ಧರಿಸುವುದಕ್ಕೆ ಸಂವಿಧಾನ ಅಡ್ಡಿಯಾಗಿರುವುದೇ ಜಾತಿ, ಧರ್ಮಗಳ ಮಧ್ಯೆ ಸಂಘರ್ಷಕ್ಕೆ ಮೂಲ ಕಾರಣ ಎಂದು ಶಾಸಕ ರಿಜ್ವಾನ್‌ ಅರ್ಷದ್ ಹೇಳಿದರು.

ದಲಿತ ವಿಮೋಚನಾ ಸೇನೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಅಭಿಯಾನೋತ್ಸವ, 20ನೇ ರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜಕಾರಣಕ್ಕಾಗಿ ಹಿಂದೂ ಮುಸ್ಲಿಮರ ಮಧ್ಯೆ ಸಮರ ಸೃಷ್ಟಿಸುತ್ತಿದ್ದಾರೆ. ಮೇಲುನೋಟಕ್ಕೆ ಇದು ಒಂದು ಧರ್ಮದ ಜನರನ್ನು ಗುರಿಯಾಗಿಸಿದಂತೆ ಕಂಡರೂ, ಅದರ ಹಿಂದಿರುವ ಸತ್ಯವೇ ಬೇರೆ. ಸಾಮಾಜಿಕ ನ್ಯಾಯ, ಸಮಾನತೆ, ಗೌರವವೇ ಪ್ರಧಾನವಾಗಿರುವ ಅಂಬೇಡ್ಕರ್‌ ಸಿದ್ಧಾಂತ ಹಾಗೂ ಮನುವಾದ ಮಧ್ಯದ ಸಂಘರ್ಷಕ್ಕೆ ಕೋಮು ರೂಪ ನೀಡುತ್ತಿದ್ದಾರೆ. ಮನುವಾದದ ನಿಜವಾದ ವಿರೋಧ ಸಂವಿಧಾನಕ್ಕೆ. ಸಂವಿಧಾನ ಎಲ್ಲರಿಗೂ ಶ್ರೇಷ್ಠತೆ ನೀಡಿದ್ದೇ ಅದಕ್ಕೆ ಕಾರಣ. ಅದನ್ನು ನಿರ್ನಾಮ ಮಾಡಲು ಜಾತಿ‌, ಧರ್ಮದ ಅಸ್ತ್ರ ಬಳಸುತ್ತಿದ್ದಾರೆ. ಮುಸ್ಲಿಮರ ವಿರೋಧ ನೆಪ ಮಾತ್ರ. ಈಗಿನ ಬಹುತೇಕ ಮುಸ್ಲಿಮರು ಹಿಂದೆ ದಲಿತರಾಗಿದ್ದಿರಬಹುದು. ಅದಕ್ಕಾಗಿ ಅಷ್ಟೊಂದು‌ ದ್ವೇಷ ಎಂದು ವಿಶ್ಲೇಷಿಸಿದರು.

ADVERTISEMENT

ದೇಶದ ಶೇಕಡ 1ರಷ್ಟು ಜನಸಂಖ್ಯೆ ಶೇ 40 ಸಂಪತ್ತನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದೆ.ತಳಹಂತದ ಶೇ 50 ಜನರು ಶೇ 3ರಷ್ಟು ಸಂಪತ್ತು ಹೊಂದಿದ್ದಾರೆ. ಈ ತಳ ಸಮುದಾಯದಲ್ಲಿ ದಲಿತರು, ಅಲ್ಪಸಂಖ್ಯಾತರೂ ಇದ್ದಾರೆ. ದಲಿತ ಸಂಘಟನೆಗಳು ಇನ್ನಷ್ಟು ಗಟ್ಟಿಗೊಳ್ಳಬೇಕು. ಅವುಗಳ ಪ್ರಾಬಲ್ಯ ಕಡಿಮೆಯಾದರೆ ಕೋಮು ಶಕ್ತಿಗಳು ಸಂವಿಧಾನದ ಆತ್ಮವನ್ನೇ ನಾಶ ಮಾಡಲಿವೆ ಎಂದು ಎಚ್ಚರಿಸಿದರು.

ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಾಮಯ್ಯ ಮಾತನಾಡಿ, ‘ಅಂಬೇಡ್ಕರ್‌ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಸರ್ಕಾರ ಗಳನ್ನು ಎಚ್ಚರಿಸಲು ಹೋರಾಟ ಅನಿವಾರ್ಯ.‌ ಹೋರಾಟಗಳಿಲ್ಲದೇ ಯಾವ ಬೇಡಿಕೆಗಳೂ ಸುಲಭವಾಗಿ ಈಡೇರುವುದಿಲ್ಲ. ದುರ್ಬಲ ವರ್ಗದ ಜನರು ಬೆಲೆ ಏರಿಕೆಯಿಂದ ಬಸವಳಿದಿದ್ದಾರೆ. ಜನರ ಭಾವನೆ ಅರ್ಥ ಮಾಡಿಕೊಳ್ಳುವ ಸರ್ಕಾರವನ್ನು ಇನ್ನಾ ದರೂ ಆಯ್ಕೆ ಮಾಡಬೇಕು’ ಎಂದರು.

ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಚಿತ್ರದುರ್ಗದ ಹೋರಾಟ ಗಾರ ದಿ.ಜಯಣ್ಣ (ಮರಣೋತ್ತರ) ಅವರಿಗೆ ಬಿ.ಕೃಷ್ಣಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಯಣ್ಣ ಅವರ ಪುತ್ರ ಜಯಪ್ರಕಾಶ್ ಪ್ರಶಸ್ತಿ ಸ್ವೀಕರಿಸಿದರು. ದಲಿತ ವಿಮೋಚನಾ ಸೇನೆ(ಡಿವಿಎಸ್‌) ಸಂಸ್ಥಾಪಕ ಅಧ್ಯಕ್ಷ ಮಾ.ಮುನಿರಾಜು ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಾಹಿತಿ ಬಂಜಗೆರೆ ಜಯಪ್ರಕಾಶ್, ಶಾಸಕ ಜಮೀರ್‌ ಅಹಮದ್‌ ಖಾನ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ, ಡಿವಿಎಸ್‌ ಕಾರ್ಯದರ್ಶಿ ಜಿ.ಮಂಜುನಾಥ್‌, ವಕೀಲ ಹರಿರಾಮ್. ಸಾಹಿತಿ ವಡ್ಡಗೆರೆ ನಾಗರಾಜಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.