ಬೆಂಗಳೂರು: ‘ದೇಶದ ಸಂವಿಧಾನ ಬದಲಿಸುವ ಕುರಿತು ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನದಲ್ಲಿ ಯಾವುದೇ ದೋಷ ಇಲ್ಲದ ಕಾರಣ ಬದಲಾವಣೆ ಮಾಡುವುದು ಸರಿಯಲ್ಲ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.
ವಿಧಾನಸಭೆ ಸಚಿವಾಲಯ ಶನಿವಾರ ಆಯೋಜಿಸಿದ್ದ ‘ಸಂವಿಧಾನದ ಹಿರಿಮೆ ಗರಿಮೆ ಹಾಗೂ ಅರಿವು’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಸಂವಿಧಾನವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಬದುಕಬೇಕು. ಅದರಲ್ಲಿ ದೋಷ ಹುಡುಕುವುದಲ್ಲ. ವಕೀಲರು, ನ್ಯಾಯಾಧೀಶರು ಸಹ ಪೂರ್ಣ ಓದಿಲ್ಲ. ಜ್ಞಾನ ಬೆಳೆಸಿಕೊಳ್ಳಲು ಯುವಜನರು ಹೆಚ್ಚು ಪುಸ್ತಕಗಳನ್ನು ಓದಬೇಕು’ ಎಂದು ಸಲಹೆ ನೀಡಿದರು.
‘ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಎಲ್ಲಾ ಕ್ಷೇತ್ರಗಳನ್ನು ಪ್ರವೇಶಿಸಲು ಸಂವಿಧಾನವೇ ಕಾರಣ. ದಲಿತ ಮಹಿಳೆ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. ರಾಯಭಾರಿ, ರಾಜ್ಯಪಾಲರೂ ಆಗಿದ್ದಾರೆ. ಸಂವಿಧಾನ ತೋರಿದ ಮಾರ್ಗದಲ್ಲಿ ನಾವು ಸಾಗಬೇಕು’ ಎಂದರು.
‘ದೇಶದಲ್ಲಿ ಹತ್ತು ಲಕ್ಷ ಜನಕ್ಕೆ 21 ನ್ಯಾಯಾಧೀಶರು ಇದ್ದಾರೆ. ನ್ಯಾಯಾಲಯ, ನ್ಯಾಯಾಧೀಶರು ಮತ್ತು ಸಿಬ್ಬಂದಿ ಕೊರತೆಯಿಂದ ವ್ಯಾಜ್ಯಗಳು ಇತ್ಯರ್ಥವಾಗುವುದು ವಿಳಂಬವಾಗುತ್ತಿದೆ. ಬ್ರಿಟಿಷರ ಕಾಲದ ಕಾನೂನಿಗೆ ತಿದ್ದುಪಡಿ ತಂದು, ಸರಳೀಕರಣಗೊಳಿಸಿ ತ್ವರಿತವಾಗಿ ವ್ಯಾಜ್ಯಗಳು ಇತ್ಯರ್ಥವಾಗುವಂತೆ ಮಾಡಬೇಕು’ ಎಂದು ಹೇಳಿದರು.
‘ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯ. ಆದರೆ ಜಾರಿ ಮಾಡಲು ಇದು ಸಕಾಲ ಅಲ್ಲ. ಧರ್ಮ ಮತ್ತು ಜಾತಿಗಳ ನಡುವೆ ಘರ್ಷಣೆ ಉಂಟಾಗಿದೆ. ಈಗ ಮನಸ್ಸುಗಳನ್ನು ಬೆಸೆಯುವ ಕೆಲಸವಾಗಬೇಕು. ಮುಂದೆ ಜಾರಿ ಮಾಡಬಹುದು’ ಎಂದು ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹಾಜರಿದ್ದರು.
ಕಾಲಕ್ಕೆ ತಕ್ಕಂತೆ ಸಂವಿಧಾನ ತಿದ್ದುಪಡಿ ಅಗತ್ಯ. ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಕಾನೂನಿ ಬಗ್ಗೆ ಜನರಿಗೆ ಸ್ವಲ್ಪವಾದರೂ ಜ್ಞಾನ ಇರಬೇಕು.ಕೆ.ಪಿ.ಬಾಲಸುಬ್ರಮಣ್ಯ ಕಂಜರ್ಪಣೆ, ವಕೀಲ
ಸಂವಿಧಾನ ಜಾರಿಯಾಗಿ ಏಳು ದಶಕವಾಗಿದೆ. ನೆರೆಯ ಪಾಕಿಸ್ತಾನ ಮ್ಯಾನ್ಮಾರ್ ದೇಶದಲ್ಲಿ ಮಿಲಿಟರಿ ಆಡಳಿತ ಇದೆ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ.ಶಶಿಕಲಾ ಗುರುಪುರ್, ಸಿಂಬಯಾಸಿಸ್ ಲಾ ಸ್ಕೂಲ್ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.