
ಬೆಂಗಳೂರು: ವಿದ್ಯಾರ್ಥಿಗಳಿಗೆ 24X7 ಉಚಿತ ಇಂಟರ್‌ನೆಟ್ ಸೌಲಭ್ಯ, ಕ್ಯಾಂಪಸ್ ಹಾಗೂ ಆರೋಗ್ಯ ಕೇಂದ್ರದ ಉನ್ನತೀಕರಣ, ಸ್ಮಾರ್ಟ್ ಕ್ಲಾಸ್ ರೂಂ ವ್ಯವಸ್ಥೆ, ₹50 ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಭವನ ಹಾಗೂ ₹12 ಕೋಟಿ ವೆಚ್ಚದಲ್ಲಿ ಸಂಶೋಧನಾ ಭವನ ನಿರ್ಮಾಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ‘ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ’ (ಪಿಎಂ–ಉಷಾ) ಯೋಜನೆಯಡಿ ‘ವಿಶ್ವವಿದ್ಯಾಲಯಗಳಲ್ಲಿ ಬಹು ಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆ’ (ಎಂಇಆರ್‌ಯು) ಅಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ ಬಿಡುಗಡೆಯಾಗಿದೆ.
ಪ್ರಸ್ತಾವಿತ ಹೊಸ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ₹50 ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಭವನದ ನಿರ್ಮಾಣ, ₹30 ಕೋಟಿ ವೆಚ್ಚದಲ್ಲಿ ಕ್ಯಾಂಪಸ್ ಉನ್ನತೀಕರಣ, ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್ ಕ್ಲಾಸ್, ಆರೋಗ್ಯ ಕೇಂದ್ರದ ಉನ್ನತೀಕರಣ, ಮ್ಯೂಸಿಯಂ ಸಂಪನ್ಮೂಲಗಳ ಡಿಜಿಟಲೀಕರಣ, ಪರಿಸರ ಸಂರಕ್ಷಣೆ ಮತ್ತು ಹಸಿರು ಕ್ಯಾಂಪಸ್ ಚಟುವಟಿಕೆಗೆ ಈ ಅನುದಾನವನ್ನು ಬಳಸಲಾಗುತ್ತದೆ.
‘ಶೈಕ್ಷಣಿಕ ಭವನ ನಿರ್ಮಾಣದ ಜಾಗವು ವಿಶ್ವವಿದ್ಯಾಲಯದ ಜೈವಿಕ ಉದ್ಯಾನ, ಪರಿಸರ ಪ್ರದೇಶದಲ್ಲಿ ಇಲ್ಲ. ಈ ಪ್ರದೇಶದಲ್ಲಿ 419 ಮರಗಳು ಇವೆ. ಇವುಗಳಲ್ಲಿ ಹೆಚ್ಚಿನವು ಅಕೇಶಿಯ ಮತ್ತು ನೀಲಗಿರಿ ಮರಗಳಾಗಿವೆ. 282 ಮರಗಳನ್ನು ಮಾತ್ರ ಕಟ್ಟಡ ನಿರ್ಮಾಣಕ್ಕಾಗಿ ಕಡಿಯಲಾಗುತ್ತಿದ್ದು, ಉಳಿದ 137 ಮರಗಳನ್ನು ಬಫರ್ ವಲಯದಲ್ಲಿ ಉಳಿಸಲಾಗುತ್ತದೆ. ಸಣ್ಣ ಮರಗಳನ್ನು ಹತ್ತಿರದ ಸ್ಥಳದಲ್ಲೆ ಪುನಃ ನೆಡಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ಎಂ ಜಯಕರ ತಿಳಿಸಿದರು.
‘ಶೈಕ್ಷಣಿಕ ಭವನವು 1,07,376 ಚದರ ಅಡಿ ವಿಸ್ತೀರ್ಣ ಹೊಂದಿರಲಿದ್ದು ಮೂರು ಮಹಡಿಗಳನ್ನು ಒಳಗೊಂಡಿರುತ್ತದೆ. ಡಿಜಿಟಲ್ ಶಿಕ್ಷಣ, ದೂರಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಗಣಿತ ಸೇರಿದಂತೆ ಆಧುನಿಕ ವಿಷಯಗಳ ಕುರಿತು ಅಧ್ಯಯನ ನಡೆಸಲು ಇದನ್ನು ಬಳಸಲಾಗುತ್ತದೆ’ ಎಂದರು.
₹12 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಂಶೋಧನಾ ಭವನವು 16,163 ಚದರ ಅಡಿ ವಿಸ್ತೀರ್ಣವಿದ್ದು, ಎರಡು ಮಹಡಿಗಳನ್ನು ಒಳಗೊಂಡಿರುತ್ತದೆ. ಇದನ್ನು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ, ಕೃತಕ ಬುದ್ದಿಮತ್ತೆ (ಎಐ) ಸೇರಿದಂತೆ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾದ ವಿಷಯಗಳ ಕುರಿತ ಸಂಶೋಧನೆಗೆ ಬಳಸಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.
‘ಪಿಎಂ-ಉಷಾ ಯೋಜನೆಯಡಿ ₹8 ಕೋಟಿಯನ್ನು ಪರಿಸರ ಸಂರಕ್ಷಣಾ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಕ್ಯಾಂಪಸ್‌ನಲ್ಲಿ ಎಲ್ಇಡಿ ದೀಪಗಳ ವ್ಯವಸ್ಥೆ, ಪಾದಚಾರಿ ಮಾರ್ಗಗಳ ನವೀಕರಣ, ಎಲೆಕ್ಟ್ರಿಕ್ ವಾಹನಗಳು ಹಾಗೂ ಬೈಸಿಕಲ್‌ಗಳ ಬಳಕೆಗೆ ಉತ್ತೇಜನ, ಚರಕವನ, ಪಂಚವಟಿ ವಲಯಗಳ ಪುನರುಜ್ಜೀವನ, ಮಳೆನೀರು ಸಂಗ್ರಹಣಾ ವ್ಯವಸ್ಥೆ ಪುನರ್ ನಿರ್ಮಾಣ ಇತ್ಯಾದಿ ಸೇರಿವೆ’ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರ ಪಿಎಂ ಉಷಾ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ ಘೋಷಿಸಿತ್ತು. ಇದರಲ್ಲಿ ಶೇ 60ರಷ್ಟು ಕೇಂದ್ರ ಸರ್ಕಾರ ಮತ್ತು ಶೇ 40ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ’ ಎಂದರು.
ಮೂಲಸೌಕರ್ಯ ನವೀಕರಣಕ್ಕೆ ₹19.24 ಕೋಟಿ
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ₹9.5 ಕೋಟಿ ಆಸ್ಪತ್ರೆಯ ಉನ್ನತೀಕರಣಕ್ಕೆ ₹1 ಕೋಟಿ ಪರಿಸರ ಸಂರಕ್ಷಣೆಗೆ ₹8 ಕೋಟಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿರುವ ವಸ್ತು ಸಂಗ್ರಹಾಲಯಗಳ ಅಭಿವೃದ್ಧಿಗೆ ₹1 ಕೋಟಿ ಮೀಸಲಿಡಲಾಗಿದೆ ಎಂದು ಎಸ್.ಎಂ. ಜಯಕರ ‘ಪ್ರಜಾವಾಣಿ’ಗೆ ತಿಳಿಸಿದರು.
ಕನ್ನಡ ಭೂವಿಜ್ಞಾನ ಪ್ರಾಣಿಶಾಸ್ತ್ರ ಜಾನಪದ ಹಾಗೂ ಇತಿಹಾಸ ವಿಭಾಗಗಳಲ್ಲಿರುವ ವಸ್ತು ಸಂಗ್ರಹಾಲಯಗಳ ನವೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಯೋಗಾಲಯ ಕಟ್ಟಡದ ನವೀಕರಣ ಜೊತೆಗೆ ಉಪಕರಣಗಳನ್ನು ಖರೀದಿಸಲಾಗುತ್ತದೆ.ಎಸ್.ಎಂ. ಜಯಕರ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ
ಶೈಕ್ಷಣಿಕ ಕ್ಷೇತ್ರದ ಮುಂದಿನ 25 ವರ್ಷಗಳಿಗೆ ಬೇಕಾಗುವ ಮೂಲಸೌಕರ್ಯಗಳನ್ನು ಪಿಎಂ ಉಷಾ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಿಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಲಭ್ಯವಾಗಲಿವೆ.ಸುರೇಶ್, ಪಿ.ಎಂ. ಉಷಾ ಯೋಜನೆಯ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.