ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ದೊಡ್ಡಬಳ್ಳಾಪುರ ಹಾಗೂ ತುಮಕೂರಿನಲ್ಲಿ ಶಾಶ್ವತ ನಕ್ಷತ್ರ ಮಂದಿರಗಳನ್ನು ನಿರ್ಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹2.5 ಕೋಟಿಯಿಂದ ₹3 ಕೋಟಿವರೆಗೆ ಸಿಎಸ್‌ಆರ್ ನಿಧಿ ಬಳಸಿಕೊಂಡು ದೊಡ್ಡಬಳ್ಳಾಪುರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆ್ಯನಿ ಬೆಸೆಂಟ್ ಉದ್ಯಾನ ಹಾಗೂ ತುಮಕೂರಿನ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಾಶ್ವತ ನಕ್ಷತ್ರ ಮಂದಿರಗಳನ್ನು ನಿರ್ಮಿಸಲಾಗುವುದು. ಇದರಲ್ಲಿ 85 ರಿಂದ 100 ಆಸನಗಳ ಸಾಮರ್ಥ್ಯ ಇರಲಿವೆ’ ಎಂದು ಹೇಳಿದರು.
‘ಈ ನಕ್ಷತ್ರ ಮಂದಿರಗಳಲ್ಲಿ ವಿಜ್ಞಾನದ ಅಧ್ಯಯನ, ಶಿಕ್ಷಕರಿಗೆ ತರಬೇತಿ, ಗಗನ ವೀಕ್ಷಣಾ ಶಿಬಿರಗಳು, ಮೂಢನಂಬಿಕೆಯ ವಿರುದ್ಧ ಕಿರುಚಿತ್ರಗಳ ಪ್ರದರ್ಶನ ಮಾಡಲಾಗುತ್ತಿದೆ. ಈ ಮಂದಿರಗಳು ವಿಜ್ಞಾನ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ’ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಹಾಯಕ ಆಯುಕ್ತ ಮೋಹನ್ ಕೊಂಡಜ್ಜಿ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.