ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯ ಹೊಸೂರು ಜಂಕ್ಷನ್ ಬಳಿ ರಸ್ತೆಗೆ ಕಂಟೇನರ್ ನಿಲುಗಡೆ ಮಾಡಿ, ಸಂಚಾರ ನಿಯಮವನ್ನು ಉಲ್ಲಂಘಿಸಿದ್ದ ಆರೋಪದಡಿ ನಾಗಲ್ಯಾಂಡ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಸ್ತೆಯಲ್ಲೇ ಲಾರಿ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಂಜೆ 4.30ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಹಾಗೂ ಸರಕು ಸಾಗಣೆ ವಾಹನಗಳಿಗೆ ನಗರದ ಒಳಕ್ಕೆ ಪ್ರವೇಶಿಸದಂತೆ ನಿರ್ಬಂಧವಿದೆ. ಆದರೆ, ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಚಾಲಕ ಕಂಟೇನರ್ ಅನ್ನು ಹೊಸೂರು ಮುಖ್ಯರಸ್ತೆಯ ಮೂಲಕ ನಗರದ ಕಡೆಗೆ ಸಂಚರಿಸಲು ಪ್ರಯತ್ನಿಸಿದ್ದ. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು, ಕಂಟೇನರ್ ತಡೆದು ವಾಹನವನ್ನು ಸರ್ವೀಸ್ ರಸ್ತೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಆದರೂ, ಚಾಲಕ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಿಕೊಂಡು ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದ ಎಂದು ಪೊಲೀಸರು ಹೇಳಿದರು.
ನಿರ್ಬಂಧಿತ ಅವಧಿಯಲ್ಲಿ ಭಾರಿ ಸರಕು ಸಾಗಣೆ ವಾಹನ ಚಾಲನೆ, ರಸ್ತೆ ಮಧ್ಯದಲ್ಲೇ ವಾಹನ ನಿಲುಗಡೆ, ವಾಹನ ಸಂಚಾರಕ್ಕೆ ಅಡಚಣೆ ಮಾಡಿದ್ದ ಆರೋಪದ ಅಡಿ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಘಟನೆಯ ಸಂಪೂರ್ಣ ವಿಡಿಯೊ ದೃಶ್ಯಾವಳಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಸಂಚಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.