ADVERTISEMENT

ನಿರಂತರ ಮಳೆ; ರಾಜಾಜಿನಗರದಲ್ಲಿ ಕುಸಿದ ಮನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 19:17 IST
Last Updated 17 ಅಕ್ಟೋಬರ್ 2021, 19:17 IST

ಬೆಂಗಳೂರು: ನಗರದಲ್ಲಿ ಹಲವು ದಿನಗಳಿಂದ ಬಿಡುವು ಕೊಡುತ್ತಲೇ ನಿರಂತರವಾಗಿ ಮಳೆ ಆಗಿದ್ದು, ಇದರಿಂದಾಗಿ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಕೆಲ ಕಟ್ಟಡಗಳು ಕುಸಿದು ಬೀಳುತ್ತಿವೆ.

ಕಮರ್ಷಿಯಲ್ ಸ್ಟ್ರೀಟ್ ಮುಖ್ಯರಸ್ತೆಯಲ್ಲಿ 100 ವರ್ಷ ಹಳೇ ಕಟ್ಟಡ ಶನಿವಾರ ಮಧ್ಯಾಹ್ನ ಕುಸಿದು ಬಿದ್ದಿತ್ತು. ಅದರ ಅವಶೇಷಗಳ ತೆರವು ಕಾರ್ಯಾಚರಣೆ ಭಾನುವಾರವೂ ನಡೆಯಿತು.

ರಾಜಾಜಿನಗರ ಬಳಿಯ ದಯಾನಂದನಗರದ ರಾಜೀವ್ ಗಾಂಧಿ ಕಾಲೊನಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಸುಮಾರು 60 ವರ್ಷಗಳ ಹಳೇ ಮಳೆ, ಕೆಲ ದಿನಗಳ ಹಿಂದೆಯೇ ಬಿರುಕು ಬಿಟ್ಟಿತ್ತು. ಅಪಾಯದ ಮುನ್ಸೂಚನೆ ನೀಡುತ್ತಿತ್ತು. ಮನೆಯಲ್ಲಿ ವಾಸವಿದ್ದ ನಿವಾಸಿಗಳು ಹಾಗೂ ಅಕ್ಕ–ಪಕ್ಕದ ಮನೆಗಳ ನಿವಾಸಿಗಳು ಶನಿವಾರ ಬೆಳಿಗ್ಗೆ ಬೇರೆಡೆ ಸ್ಥಳಾಂತರಗೊಂಡಿದ್ದರು.

ADVERTISEMENT

ಬಿರುಕು ಬಿಟ್ಟು ವಾಲಿದ್ದ ಕಟ್ಟಡ ಭಾನುವಾರ ಸಂಪೂರ್ಣ ಕುಸಿದು ಬಿತ್ತು. ಮನೆಯೊಳಗೆ ಹಾಗೂ ಅಕ್ಕ–ಪಕ್ಕದಲ್ಲಿ ಯಾರೂ ಇರಲಿಲ್ಲ. ಕಟ್ಟಡದ ಕುಸಿದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರು. ಅವಶೇಷಗಳ ತೆರವು ಕೆಲಸದಲ್ಲಿ ನಿರತರಾಗಿದ್ದರು.

ಸ್ಪಂದಿಸದ ಅಧಿಕಾರಿಗಳು: ವಾರ್ಡ್‌ ನಂಬರ್ 97ರ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಬಿರುಕು ಕಾಣಿಸುತ್ತಿದ್ದಂತೆ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿರಲಿಲ್ಲವೆಂದು ನಿವಾಸಿಗಳು ಆರೋಪಿಸಿದರು.

ಅಧಿಕಾರಿ, ‘ಮನೆ ಶಿಥಿಲಗೊಂಡಿದ್ದರಿಂದ ಹೊಸ ಮನೆ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನಿವಾಸ್ ಯೋಜನೆಯಡಿ ಹಣ ಮಂಜೂರಾಗಿತ್ತು. ಆದರೆ, ಕುಟುಂಬದವರ ನಡುವಿನ ವ್ಯಾಜ್ಯದಿಂದ ಹಣ ಬಿಡುಗಡೆ ಆಗಿರಲಿಲ್ಲ. ಹಳೇ ಮನೆಯಲ್ಲೇ ಎರಡು ಕುಟುಂಬದವರು ವಾಸವಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.