ADVERTISEMENT

ಕೊರೊನಾ ಸೋಂಕು: ಆಸ್ಪತ್ರೆಗೆ ಬಂದು ‘ಹೋಗಿ’ !

ಕೋವಿಡ್‌ ಆಸ್ಪತ್ರೆಗಳಲ್ಲಿ ಹೇಳುವವರಿಲ್ಲ–ಕೇಳುವವರಿಲ್ಲ * ಸೋಂಕು ದೃಢಪಟ್ಟರೂ ಆಸ್ಪತ್ರೆಗೆ ಕರೆದೊಯ್ಯಲ್ಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 19:58 IST
Last Updated 7 ಜುಲೈ 2020, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ, ರೋಗಿಗಳ ಪಡಿಪಾಟಲು ಜಾಸ್ತಿಯಾಗುತ್ತಿದೆ. ಕೊರೊನಾ ಸೋಂಕಿತರು ಆಸ್ಪತ್ರೆಗೆ ತೆರಳಿದರೂ, ಅಲ್ಲಿ ಯಾವ ವಾರ್ಡ್‌, ಯಾವ ಹಾಸಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಯದೆಯೇ ಮನೆಗೆ ಮರಳುತ್ತಿದ್ದಾರೆ!

‘ಹಲಸೂರಿನಲ್ಲಿ ಮಹಿಳೆಯೊಬ್ಬರಿಗೆ ಸೋಂಕು ತಗಲಿದೆ ಎಂದು ಬಿಬಿಎಂಪಿ ಕಚೇರಿಯಿಂದ ಕರೆ ಬಂದಿತ್ತು. ಆಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಯೊಳಗೆ ಅವರನ್ನು ಬಿಟ್ಟಿದ್ದಾರೆ. ಆದರೆ, ಅಲ್ಲಿ ಹೇಳುವವರು–ಕೇಳುವವರು ಯಾರೂ ಇರಲಿಲ್ಲ. ಹತ್ತು ಹಾಸಿಗೆ ಇವೆ, ಅಲ್ಲಿ ಹೋಗಿ ಎಂದು ಹೇಳಿದ್ದಾರೆ. ವಾರ್ಡ್‌ಗೆ ಹೋದರೆ, ಅಲ್ಲಿ ಹಾಸಿಗೆ ಇಲ್ಲ. ಕೊನೆಗೆ ಕುಟುಂಬದವರಿಗೆ ಕರೆ ಮಾಡಿದ ಮಹಿಳೆ ಮನೆಗೆ ವಾಪಸ್‌ ಆಗಿದ್ದಾರೆ’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಂಕಿದ್ದರೂ ಮನೆಯಲ್ಲೇ !

ADVERTISEMENT

‘ಮನೆಯಲ್ಲಿ ಡಯಾಲಿಸಿಸ್‌ ರೋಗಿ ಇದ್ದಾರೆ. ಸೋಮವಾರ ಸಂಜೆಯಿಂದ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಒಂದೂವರೆ ದಿನವಾದರೂ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿಲ್ಲ’ ಎಂದು ಭಾರತಿನಗರ ವಾರ್ಡ್‌ನಲ್ಲಿನ ಸೋಂಕಿತ ವ್ಯಕ್ತಿಯ ಸಂಬಂಧಿಯೊಬ್ಬರು ದೂರಿದ್ದಾರೆ.

‘ಶಿವಾಜಿನಗರ ಬಳಿಯ ಭಾರತಿನಗರದಲ್ಲಿ ಸೋಂಕಿತ ವ್ಯಕ್ತಿಯ ಮನೆಯಲ್ಲಿ ಆರು ಜನ ಇದ್ದಾರೆ. ಅವರಲ್ಲಿ ಇಬ್ಬರು ಹಿರಿಯ ನಾಗರಿಕರು, ಇಬ್ಬರು ಮಕ್ಕಳೂ ಇದ್ದಾರೆ. ನೋಡಲ್‌ ಅಧಿಕಾರಿಗಳ್ಯಾರೂ ಕರೆ ಸ್ವೀಕರಿಸುತ್ತಿಲ್ಲ. 108ಗೆ ಕರೆ ಮಾಡಿದರೆ, ಮೊದಲು ಆಸ್ಪತ್ರೆಯಲ್ಲಿ ಹಾಸಿಗೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ. ನಂತರ ಬರುತ್ತೇವೆ ಎಂದು ಹೇಳುತ್ತಾರೆ. ಮನೆಯಲ್ಲಿ ಇರುವ ಇತರರಿಗೂ ಸೋಂಕು ಹರಡಿದರೆ ಗತಿ ಏನು’ ಎಂದು ಅವರು ಪ್ರಶ್ನಿಸುತ್ತಾರೆ.

‘ನಮ್ಮ ವಾರ್ಡ್‌ನಲ್ಲಿ ನಿತ್ಯ ಮೂರರಿಂದ–ನಾಲ್ಕು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ನನಗೆ ಕರೆ ಮಾಡಿದ ಎಲ್ಲರಿಗೂ ಆಸ್ಪತ್ರೆಯ ವ್ಯವಸ್ಥೆ ಮಾಡುತ್ತಿದ್ದೇವೆ. ಆದರೆ, ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯಲು ಎರಡು ದಿನ ಸಮಯ ಹಿಡಿಯುತ್ತಿದೆ’ ಎಂದು ಭಾರತಿನಗರ ವಾರ್ಡ್‌ ಪಾಲಿಕೆ ಸದಸ್ಯ ಶಕೀಲ್‌ ಅಹ್ಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋಡಲ್‌ ಅಧಿಕಾರಿಗಳು ಸೇರಿದಂತೆ ಬಿಬಿಎಂಪಿಯ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಬೇಕಾಗಿರುವುದರಿಂದ ವಿಳಂಬವಾಗುತ್ತಿದೆ. ಉದ್ದೇಶಪೂರ್ವಕವಾಗಿ ಯಾರೂ ನಿಧಾನ ಮಾಡುತ್ತಿಲ್ಲ’ ಎಂದು ಅವರು ಹೇಳಿದರು.

ಕೋಣನಕುಂಟೆಯಲ್ಲಿ ಧರಣಿ

ಖಾಸಗಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲು ಹೊರಟ ಅಧಿಕಾರಿಗಳ ವಿರುದ್ಧ ಕೋಣನಕುಂಟೆ ನಿವಾಸಿಗಳು ಮಂಗಳವಾರ ಧರಣಿ ನಡೆಸಿದರು.

ಬಡಾವಣೆಯಲ್ಲಿರುವ ಸುಪೂರ್ವ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಆಸ್ಪತ್ರೆಯ ಮುಂದೆ ಸೇರಿ ಪ್ರತಿಭಟನೆ ನಡೆಸಿದರು.

‘ಆಸ್ಪತ್ರೆಯ ಅಕ್ಕ–ಪಕ್ಕ ಹಲವು ಮನೆಗಳಿವೆ. ಇಲ್ಲಿನ ಮುಖ್ಯರಸ್ತೆಯಲ್ಲಿ ಸದಾ ಜನಸಂದಣಿ ಇರುತ್ತದೆ. ಇದನ್ನು ಕೋವಿಡ್‌ ಆಸ್ಪತ್ರೆಯಾಗಿ ಬಳಸಿದರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಶುಲ್ಕ ನಿಯಂತ್ರಣ ವಿವರ ಕೇಳಿದ ಹೈಕೋರ್ಟ್

‘ಕೋವಿಡ್-19ಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಶುಲ್ಕದ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇದೆಯೇ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ಏನಾದರೂ ನಿಬಂಧನೆಗಳಿವೆಯೇ’ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ‘ನಗರದಲ್ಲಿ ನಿಗದಿತ ಕೋವಿಡ್-19 ಆಸ್ಪತ್ರೆಗಳೆಷ್ಟು ಹಾಗೂ ಅಲ್ಲಿರುವ ಒಟ್ಟು ಹಾಸಿಗೆಗಳ ಸಂಖ್ಯೆಯ ಬಗ್ಗೆ ವರದಿ ಸಲ್ಲಿಸಿ’ ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಸೂಚಿಸಿದೆ.

ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಲಾಗಿದೆ.

ಗೊಂದಲ: ಗರ್ಭಿಣಿ ಪರದಾಟ

ಹೊಸಗುಡ್ಡದಹಳ್ಳಿಯಲ್ಲಿ ಗರ್ಭಣಿಯೊಬ್ಬರಿಗೆ ಸೋಂಕು ತಗುಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರೆ, ಯಾವುದೇ ಸೋಂಕು ತಗುಲಿಲ್ಲ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇದರಿಂದ ಮಹಿಳೆಯ ಕುಟುಂಬದವರು ಗೊಂದಲದಲ್ಲಿದ್ದಾರೆ.

ಗರ್ಭಿಣಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸೋಮವಾರ ತಡರಾತ್ರಿ ಕರೆ ಮಾಡಿದ ಪಾಲಿಕೆ ಅಧಿಕಾರಿಗಳು, ನಿಮಗೆ ಸೋಂಕು ತಗುಲಿದೆ. ಮಂಗಳವಾರ ಬೆಳಿಗ್ಗೆ 10ಕ್ಕೆ ಆಂಬುಲೆನ್ಸ್‌ ಬರಲಿದೆ ಎಂದು ತಿಳಿಸಿದ್ದಾರೆ. ಬೆಳಿಗ್ಗೆ ಆಂಬುಲೆನ್ಸ್‌ನಲ್ಲಿ ತೆರಳಿದ ಮಹಿಳೆ, ಖಾಸಗಿ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದಾರೆ. ಅಲ್ಲಿನ ವೈದ್ಯರು, ‘ನಿಮಗೆ ಸೋಂಕು ತಗುಲಿಲ್ಲ’ ಎಂದು ಮನೆಗೆ ಕಳಿಸಿದ್ದಾರೆ.

‘ಬಿಬಿಎಂಪಿ ಅಧಿಕಾರಿಗಳು ಒಂದು ಹೇಳಿದರೆ, ಖಾಸಗಿ ಆಸ್ಪತ್ರೆ ವೈದ್ಯರು ಬೇರೆಯದೇ ಹೇಳುತ್ತಾರೆ. ಸೋಂಕು ಇದೆಯೇ, ಇಲ್ಲವೇ ಎಂಬುದನ್ನು ದೃಢವಾಗಿ ಹೇಳಿದರೆ ಮಾತ್ರ ಆಸ್ಪತ್ರೆಗೆ ಕಳಿಸುತ್ತೇವೆ’ ಎಂದು ಮಹಿಳೆಯ ಕುಟುಂಬದವರು ತಿಳಿಸಿದ್ದಾರೆ.
ನೇರ ಸಂಪರ್ಕ ಹೊಂದಿದ್ದವರ ಪರೀಕ್ಷೆ ವಿಳಂಬ

ಈ ಹಿಂದೆ ಯಾರಿಗಾದರೂ ಕೊರೊನಾ ಸೋಂಕು ದೃಢಪಟ್ಟರೆ ಅವರ ನೇರ ಸಂಪರ್ಕ ಹೊಂದಿದ್ದ ಕುಟುಂಬಸ್ಥರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಆದರೆ ಈ ಪ್ರಕ್ರಿಯೆ ಮೂರು ನಾಲ್ಕು ದಿನಗಳಿಂದ ಸಮರ್ಪಕವಾಗಿ ನಡೆಯುತ್ತಿಲ್ಲ.

ಸುಲ್ತಾನ್‌ಪಾಳ್ಯ ನಿವಾಸಿಯಾಗಿರುವ ವೃದ್ಧರೊಬ್ಬರಿಗೆ ಸೋಂಕು ಇರುವುದು ಸೋಮವಾರ ಧೃಡಪಟ್ಟಿದೆ. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮನೆಯವರಿಗೆ ಬಿಬಿಎಂಪಿಯವರು ಕರೆ ಮಾಡಿದ್ದಾರೆ. ಆದರೆ, ಸೋಂಕಿತ ವ್ಯಕ್ತಿ ಜೊತೆ ನೇರ ಸಂಪರ್ಕ ಹೊಂದಿದ್ದ ಕುಟುಂಬಸ್ಥರ ಆರೋಗ್ಯ ತಪಾಸಣೆಗೆ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಪೂರ್ವ ವಲಯದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು, ‘ಪ್ರಯೋಗಾಲಯ ಸಿಬ್ಬಂದಿಗೇ ಸೋಂಕು ತಗುಲಿದೆ. ಹಾಗಾಗಿ ಸೋಂಕಿತರ ಜೊತೆ ನೇರ ಸಂಪರ್ಕ ಹೊಂದಿದ ವ್ಯಕ್ತಿಗಳ ಆರೋಗ್ಯ ತಪಾಸಣೆ ಸ್ವಲ್ಪ ವಿಳಂಬವಾಗಿರುವುದು ನಿಜ. ಆರೋಗ್ಯ ಪರೀಕ್ಷೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸ್ವಯಂಪ್ರೇರಿತ ಲಾಕ್‌ಡೌನ್‌: ವಿರೋಧ

‘ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂನಿರ್ಬಂಧ ಹಾಕಿಕೊಳ್ಳಿ. ಯಾರೂ ಹೊರಗಡೆ ಬರಬೇಡಿ’ ಎಂದು ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್‌ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ. ಈ ನಿರ್ಧಾರಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಾರ್ಡ್‌ನ ಒಂದೊಂದು ಕ್ರಾಸ್‌ನಲ್ಲಿಯೂ ಕೊರೊನಾ ಸೋಂಕಿತರು ಇದ್ದಾರೆ. ಸೋಂಕಿತರು ಆಸ್ಪತ್ರೆಗೆ ಹೋದರೆ ಹಾಸಿಗೆಗಳು ಸಿಗುತ್ತಿಲ್ಲ. ಮೊದಲು, ಈ ಸಮಸ್ಯೆಗಳತ್ತ ಗಮನಹರಿಸುವ ಬದಲು, ಪ್ರಚಾರಕ್ಕಾಗಿ ಸ್ವಯಂಪ್ರೇರಿತ ಲಾಕ್‌ಡೌನ್‌ ಮಾಡಿ ಎಂದು ಹೇಳುತ್ತಿದ್ದಾರೆ’ ಎಂದು ಶಾಂತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್‌ ಹೇಳಿದರು.

ಪಿಎಚ್‌ಸಿಗಳಲ್ಲಿ ಫಿವರ್‌ ಕ್ಲಿನಿಕ್‌

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‍ಗಳಲ್ಲಿ ಬರುವ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಹಾಗೂ ರೆಫರಲ್ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು (ಫಿವರ್‌ ಕ್ಲಿನಿಕ್‌) ಪ್ರಾರಂಭಿಸಲಾಗಿದೆ. ‘ಇಲ್ಲಿ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಇದರ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ. ಗಂಟಲು ಮಾದರಿ ದ್ರವ ಸಂಗ್ರಹಣೆಯನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೂ ನಡೆಸಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.