ADVERTISEMENT

ತಂದೆಯ ಶವಕ್ಕಾಗಿ ಎರಡು ದಿನ ಕಣ್ಣೀರಿಟ್ಟ ಮಗಳು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 23:05 IST
Last Updated 3 ಆಗಸ್ಟ್ 2020, 23:05 IST
ಮೃತ ದೇಹ–ಪ್ರಾತಿನಿಧಿಕ ಚಿತ್ರ
ಮೃತ ದೇಹ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಪಡಿಪಾಟಲು ಮುಂದುವರಿದಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೆಲವರು ತೊಂದರೆಗೆ ಈಡಾದರೆ, ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ತಂದೆಯ ಶವಕ್ಕಾಗಿ ಪುತ್ರಿ ಆಸ್ಪತ್ರೆಯ ಮುಂದೆ ಕಣ್ಣೀರು ಹಾಕಿದ್ದಾರೆ.

ಬೇಗೂರಿನ 46 ವರ್ಷದ ವ್ಯಕ್ತಿಯೊಬ್ಬರು ಮೂತ್ರಪಿಂಡ ಸಮಸ್ಯೆ ಚಿಕಿತ್ಸೆ ಪಡೆಯಲು ಜುಲೈ 22ರಂದು ಮಡಿವಾಳದ ಸೇಂಟ್‌ ಜಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 25ರಂದು ಕೊರೊನಾ ಪಾಸಿಟಿವ್‌ ಆಗಿದೆ ಎಂದು ಆಸ್ಪತ್ರೆಯವರು ವರದಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿಯ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾದಾಗ, ಅವರನ್ನು ತೀವ್ರ ನಿಗಾಘಟಕಕ್ಕೆ ದಾಖಲಿಸಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಚಿಕಿತ್ಸೆ ಮುಂದುವರಿಸಲು ಶುಲ್ಕ ಕಟ್ಟಲು ಹೇಳಿದಾಗ, ಕುಟುಂಬದವರು ₹1.30 ಲಕ್ಷ ಪಾವತಿಸಿದ್ದಾರೆ.

ADVERTISEMENT

ವ್ಯಕ್ತಿ ಶನಿವಾರ ಮಧ್ಯಾಹ್ನ ತೀರಿಕೊಂಡಿದ್ದಾರೆ. ಆದರೆ, ಉಳಿದ ₹3.60 ಲಕ್ಷ ಪಾವತಿಸಿದ ನಂತರವೇ ಶವ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಹಣವಿಲ್ಲದೆ, ತಂದೆಯ ಶವಕ್ಕಾಗಿ ಅವರ ಪುತ್ರಿ ಆಸ್ಪತ್ರೆ ಎದುರು ಕಣ್ಣೀರು ಹಾಕಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲದಿದ್ದರೆ, ಮೃತದೇಹ ಕೊಡುವುದಿಲ್ಲ ಎಂದು ಹೇಳಿರುವ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯ. ಕೂಡಲೇ ಯುವತಿಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಸೇಂಟ್‌ ಆಸ್ಪತ್ರೆಗೆ ಕರೆ ಮಾಡಲಾಯಿತು. ಕರೆಗೆ ಸ್ಪಂದಿಸಲಿಲ್ಲ.

ಕೆ.ಸಿ. ಜನರಲ್‌ ಆಸ್ಪತ್ರೆ: ಅನಾಥ ಶವ ಹೆಚ್ಚಿಸಿದ ಆತಂಕ

ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ತುರ್ತುಚಿಕಿತ್ಸೆಯ ವಾರ್ಡ್‌ ಪಕ್ಕದಲ್ಲಿಯೇ ಶವವನ್ನು ಇಟ್ಟಿದ್ದರಿಂದ ಅಕ್ಕ–ಪಕ್ಕದ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಆತಂಕಕ್ಕೆ ಈಡಾಗಿದ್ದರು.

‘ರಾತ್ರಿ 12 ಗಂಟೆಯಿಂದ ಬೆಳಿಗ್ಗೆಯವರೆಗೆ ಶವವನ್ನು ವಾರ್ಡ್‌ನಲ್ಲಿಯೇ ಇಟ್ಟಿದ್ದಾರೆ. ಇದು ಕೊರೊನಾ ಸೋಂಕಿತರ ಶವ ಎಂಬ ಬಗ್ಗೆ ಅನುಮಾನವಿದೆ. ಅಲ್ಲದೆ, ಪಕ್ಕದಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್‌ ಇದೆ. ಈ ಸಂದರ್ಭದಲ್ಲಿ ಶವವನ್ನು ಹೀಗೆ ಇಟ್ಟರೆ ಹೇಗೆ’ ಎಂದು ಆಸ್ಪತ್ರೆಯ ರೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಜಾರ್ಖಂಡ್‌ ಮೂಲದ ವ್ಯಕ್ತಿಯೊಬ್ಬರ ಶವ ಅದು. ನಗರದ ಆರ್‌.ಟಿ. ನಗರದಲ್ಲಿ ವಾಸಿಸುತ್ತಿದ್ದರಂತೆ. ಆ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿತ್ತು. ಭಾನುವಾರ ರಾತ್ರಿ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಕೊಡುವ ಸಂದರ್ಭದಲ್ಲಿ ಮಧ್ಯರಾತ್ರಿ ಆ ವ್ಯಕ್ತಿ ಅಸುನೀಗಿದ್ದಾರೆ. ಪೊಲೀಸರು ಬಂದ ನಂತರವೇ ಶವವನ್ನು ತೆಗೆಯಬೇಕಾಗಿತ್ತು. ಪೊಲೀಸರಿಗೆ ಕಾಯುತ್ತಿದ್ದೆವು. ಈ ವೇಳೆ ಯಾರೋ ಫೋಟೊ ತೆಗೆದು ಮಾಧ್ಯಮಗಳಿಗೆ ಹರಿಯಬಿಟ್ಟಿದ್ದಾರೆ’ ಎಂದು ಕೆ.ಸಿ. ಜನರಲ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸರು ಬಂದು ನೋಡಿದ ನಂತರವೇ ಶವ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.