ADVERTISEMENT

ಬೆಂಗಳೂರು | ಚಿಕಿತ್ಸೆಗಾಗಿ ಅಲೆದು ಬಾಣಂತಿ ಸಾವು

ಕಣ್ಣುಬಿಡುವ ಮುನ್ನವೇ ತಾಯಿಯನ್ನು ಕಳೆದುಕೊಂಡ ಆರುದಿನಗಳ ಕೂಸು

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 21:59 IST
Last Updated 31 ಜುಲೈ 2020, 21:59 IST

ಬೆಂಗಳೂರು:ಸಕಾಲಕ್ಕೆ ಸಿಗದ ಚಿಕಿತ್ಸೆ, ಸಿಕ್ಕರೂ ದುಬಾರಿ ಶುಲ್ಕ, ಯಾವುದೇ ಕಾಯಿಲೆಯ ಚಿಕಿತ್ಸೆಗೂ ಅನಿವಾರ್ಯವಾಗಿರುವ ವರದಿ.

ನಗರದಲ್ಲಿ ಕೊರೊನಾ ಸೋಂಕಿತರಲ್ಲದೆ, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ವಿವಿಧ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಹೆರಿಗೆಯ ನಂತರದಲ್ಲಿ ಕೊರೊನಾ ಸೋಂಕು ದೃಢಪಟ್ಟ ಮಹಿಳೆಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದಾರೆ. ಆರುದಿನದ ಹಸುಗೂಸು ತಾಯಿಯನ್ನು ಕಳೆದುಕೊಂಡಿದೆ.

ADVERTISEMENT

ನಾಗರಬಾವಿ ನಿವಾಸಿ, 26ರ ವಯಸ್ಸಿನ ಮಹಿಳೆಯೊಬ್ಬರಿಗೆ ಇತ್ತೀಚೆಗಷ್ಟೇ ಹೆರಿಗೆಯಾಗಿತ್ತು. ಹೆರಿಗೆ ನಂತರ, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಜೊತೆಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು. ಚಿಕಿತ್ಸೆ ಕೊಡಿಸಲು ಮಹಿಳೆಯ ಕುಟುಂಬ ಗುರುವಾರದಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದೆ. ಯಾರೂ ದಾಖಲಿಸಿಕೊಂಡಿಲ್ಲ.

ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆ, ಎಂ.ಎಸ್. ರಾಮಯ್ಯ, ಬೌರಿಂಗ್ ಆಸ್ಪತ್ರೆ, ಪೋರ್ಟಿಸ್‌, ಸಪ್ತಗಿರಿ, ಶ್ರೀ ವೆಂಕಟೇಶ್ವರ ಆಸ್ಪತ್ರೆ, ಸುಹಾಸ್ ಚಾರಿಟಬಲ್‌ ಆಸ್ಪತ್ರೆ, ರಾಜೀವ್ ಗಾಂಧಿ ಎದೆ ಆಸ್ಪತ್ರೆ, ವಿಕ್ರಂ ಹೀಗೆ 12 ಆಸ್ಪತ್ರೆಗಳನ್ನು ಸುತ್ತಾಡಿದರೂ ಪ್ರಯೋಜನವಾಗಲಿಲ್ಲ. ಎಲ್ಲ ಆಸ್ಪತ್ರೆಗಳೂ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೊನೆಗೆ ಕುಟುಂಬದವರು ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಕರೆ ಮಾಡಿ ಚಿಕಿತ್ಸೆ ದೊರೆಯದಿರುವ ವಿಚಾರ ತಿಳಿಸಿದ್ದಾರೆ.

ಈ ಸಂಬಂಧ ಸೌಮ್ಯಾರೆಡ್ಡಿ ಟ್ವೀಟ್ ಮಾಡಿದ್ದು, ಮಹಿಳೆಯನ್ನು ಶೀಘ್ರದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತೆ ಆಸ್ಪತ್ರೆಗಳಿಗೆ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ನಾರಾಯಣ ಹೃದಯಾಲಯ ಚಿಕಿತ್ಸೆ ನೀಡಲು ಮುಂದಾಗಿದೆ. ಆದರೆ, ಅಷ್ಟರಲ್ಲಾಗಲೇ ಮಹಿಳೆ, ತೀವ್ರ ಉಸಿರಾಟದ ತೊಂದರೆಯಿಂದ ಶುಕ್ರವಾರ ಬೆಳಿಗ್ಗೆ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.