ADVERTISEMENT

ಅಮ್ಮನ ಕಾಣುವ ಮುನ್ನವೇ ಮಗು ಸಾವು

ರಾತ್ರಿಯೆಲ್ಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದ ತುಂಬು ಗರ್ಭಿಣಿ * ಆಟೊದಲ್ಲೇ ಹೆರಿಗೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 19:56 IST
Last Updated 20 ಜುಲೈ 2020, 19:56 IST

ಬೆಂಗಳೂರು: ತುಂಬು ಗರ್ಭಿಣಿಯೊಬ್ಬರು ಭಾನುವಾರ ರಾತ್ರಿ ಮೂರು ಗಂಟೆಯಿಂದ ಸೋಮವಾರ ಬೆಳಿಗ್ಗೆಯವರೆಗೆ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿದ್ದಾರೆ. ಕೊನೆಗೆ, ಕೆ.ಸಿ. ಜನರಲ್‌ ಆಸ್ಪತ್ರೆಗೆ ಬರುತ್ತಿದ್ದಾಗ ಆಟೊದಲ್ಲಿಯೇ ಹೆರಿಗೆಯಾಗಿದ್ದು, ತಾಯಿ ಗರ್ಭದಲ್ಲಿಯೇ ಮಗು ಸಾವಿಗೀಡಾಗಿದೆ.

ಶ್ರೀರಾಮಪುರದ ನಿವಾಸಿ 23 ವರ್ಷದ ಮಹಿಳೆಯೊಬ್ಬರು ಹೆರಿಗೆಗಾಗಿ ಭಾನುವಾರ ರಾತ್ರಿ ಕೆ.ಸಿ. ಜನರಲ್‌ ಆಸ್ಪತ್ರೆಗೆ ತೆರಳಿದ್ದಾರೆ. ಅವರು ಕೊರೊನಾ ವರದಿ ತರುವಂತೆ ಹೇಳಿದಾಗ ಅಲ್ಲಿಂದ ವಿಕ್ಟೋರಿಯಾ, ಶ್ರೀರಾಮಪುರ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ನೀಡಿಲ್ಲ.

‘ಭಾನುವಾರ ಮಧ್ಯರಾತ್ರಿ ತಂಗಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಗೆ ರಾತ್ರಿ 2 ಗಂಟೆ ವೇಳೆಗೆ ಹೋದೆವು. ಅರ್ಧ ತಾಸು ಕಾದರೂ ಯಾರೂ ಬಂದು ವಿಚಾರಿಸಿಲಿಲ್ಲ. ಜೋರಾಗಿ ಕೂಗಾಡಿದಾಗ ಆಸ್ಪತ್ರೆ ಸಿಬ್ಬಂದಿ ಬಂದು ಕೊರೊನಾ ವರದಿ ತರುವಂತೆ ಹೇಳಿದರು. ಸ್ಕ್ಯಾನ್‌ ಕೂಡ ಮಾಡಿಸುವಂತೆ ಹೇಳಿದರು. ಅಷ್ಟು ಮಧ್ಯರಾತ್ರಿಯಲ್ಲಿ ಯಾರ ಬಳಿ ಸ್ಕ್ಯಾನ್‌ ಮಾಡಿಸಬೇಕು. ಆದರೂ, ವಾಣಿವಿಲಾಸ್‌ ಆಸ್ಪತ್ರೆ, ಶ್ರೀರಾಮಪುರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿಯೂ ದಾಖಲಿಸಿಕೊಳ್ಳಲಿಲ್ಲ’ ಎಂದು ಮಹಿಳೆಯ ಅಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಾತ್ರಿ ವೇಳೆ ಯಾವ ವ್ಯವಸ್ಥೆ ಸಿಗಲಿಲ್ಲ. ಕೊನೆಗೆ ಆಟೊದಲ್ಲಿಯೇ ಕರೆದುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದೆವು‘ ಎಂದರು.

‘ರಾತ್ರಿ ಎರಡು ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಾಗಲೇ ನಮ್ಮ ವೈದ್ಯರು ಪರೀಕ್ಷಿಸಿದ್ದಾರೆ. ಭ್ರೂಣಕ್ಕೆ 32 ವಾರಗಳಾಗಿವೆ. ಹೊಟ್ಟೆಯಲ್ಲಿನ ಮಗು ಜೀವಂತವಾಗಿಲ್ಲ ಎಂದು ಹೇಳಿದ್ದಾರೆ. ಮಹಿಳೆಯ ಕುಟುಂಬದವರು ಇದನ್ನು ಒಪ್ಪದೆ, ಬೇರೆ ಆಸ್ಪತ್ರೆಗಳಲ್ಲಿ ತೋರಿಸುತ್ತೇವೆ ಎಂದು ಕರೆದುಕೊಂಡು ಹೋಗಿದ್ದಾರೆ. ಆ ಆಸ್ಪತ್ರೆಗಳಲ್ಲಿ ಇವರನ್ನು ದಾಖಲಿಸಿಕೊಂಡಿಲ್ಲ. ಸೋಮವಾರ ನಸುಕಿನ ಜಾವ ಮತ್ತೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಮಗುವಿನ ತಲೆ ಗರ್ಭಕೋಶದಿಂದ ಸ್ವಲ್ಪ ಹೊರಗೆ ಬಂದಿತ್ತು. ಮಗುವನ್ನು ಹೊರಗೆ ತೆಗೆಯಲಾಗಿದೆ. ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆರೋಗ್ಯವಾಗಿದ್ದಾರೆ’ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.