ADVERTISEMENT

ಹೈಕೋರ್ಟ್‌ನಲ್ಲಿ ಥರ್ಮಲ್‌ ಸ್ಕ್ರೀನಿಂಗ್‌: ಸಿಜೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 21:38 IST
Last Updated 17 ಮಾರ್ಚ್ 2020, 21:38 IST
   

ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಹೈಕೋರ್ಟ್‌ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹೈಕೋರ್ಟ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಸಿಬ್ಬಂದಿ ಮಂಗಳವಾರ ಕಕ್ಷಿದಾರರರು, ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು ಹಾಗೂ ಸಂದರ್ಶಕನ್ನು ‘ಥರ್ಮಲ್ ಸ್ಕ್ರೀನಿಂಗ್’ಗೆ ಒಳಪಡಿಸಿದರು. ಇಚ್ಛಿಸಿದ ವಕೀಲರಿಗೆ ಮಾತ್ರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು.

ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಅವರು ಬೆಳಗಿನ ಕಲಾಪಕ್ಕೂ ಮುನ್ನ ಮತ್ತು ಮಧ್ಯಾಹ್ನದ ಕಲಾಪ ಆರಂಭವಾಗುವ ಮೊದಲು ಎಲ್ಲೆಡೆ ಖುದ್ದು ಸಂಚರಿಸಿ ಪರಿಶೀಲಿಸಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ‘ಒಳಗೆ ಪ್ರವೇಶಿಸುವರ ತಾಪಮಾನವನ್ನು ಮೊದಲು ಥರ್ಮಾ ಮೀಟರ್‌
ಮೂಲಕ ಪರಿಶೀಲಿಸಲಾಗುತ್ತದೆ. ತಾಪಮಾನ ಹೆಚ್ಚಿರುವವರ ಹೆಸರು, ವಿಳಾಸ ದಾಖಲಿಸಿಕೊಂಡು, ಜ್ವರ, ಶೀತ ಹಾಗೂ ಕೆಮ್ಮಿನ ಲಕ್ಷಣ
ವಿರುವ ಮತ್ತು ವಿದೇಶಕ್ಕೆ ಭೇಟಿ ನೀಡಿದ ಬಗ್ಗೆ ಮಾಹಿತಿ ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ಒಂದೊಮ್ಮೆ ಜ್ವರ, ಶೀತ ಹಾಗೂ ಕೆಮ್ಮಿನ ಲಕ್ಷಣ ಇರುವುದು ದೃಢಪಟ್ಟರೆ ಕೂಡಲೇ ಅಂತಹವರನ್ನು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುವುದು’ ಎಂದು ವಿವರಿಸಿದರು.

ಪ್ರವೇಶ ನಿರಾಕರಣೆ: ಕೆಮ್ಮ, ಶೀತ ಮತ್ತು ಜ್ವರದ ಲಕ್ಷಣ ಕಾಣಿಸಿಕೊಂಡ ವಕೀಲರಿಗೆ ಕೋರ್ಟ್ ಆವರಣ ಪ್ರವೇಶಿಸದಂತೆ ಸಲಹೆ ನೀಡಲಾಯಿತು. ಕಕ್ಷಿದಾರರರಿಗೆ ಕೋರ್ಟ್ ಹಾಲ್ ಪ್ರವೇಶಿಸಲು ಅವಕಾಶ ನೀಡಲಿಲ್ಲ.ಕೋರ್ಟ್ ಹಾಲ್, ಕಾರಿಡಾರ್ ಮತ್ತು ಶೌಚಾಲಯ
ಗಳಲ್ಲಿ ಸ್ಯಾನಿಟೈಸರ್ ಇರಿಸಲಾಗಿತ್ತು. ಕೋರ್ಟ್ ಆವರಣದ ಪ್ರಮುಖ ಸ್ಥಳಗಳಲ್ಲಿ ಸೋಂಕು ತಡೆಯುವ ಮಾಹಿತಿಯನ್ನು ಒಳಗೊಂಡ ಪೋಸ್ಟರ್‌ ಗಳನ್ನು ಪ್ರದರ್ಶಿಸಲಾಗಿದೆ.

ಕುಗ್ಗಿದ ಸಂಖ್ಯೆ: ಕೋರ್ಟ್ ಹಾಲ್‌ಗಳ ಪ್ರವೇಶಕ್ಕೆ ಕಕ್ಷಿದಾರರಿಗೆ ನಿರ್ಬಂಧ ಹೇರಿದ ಹಾಗೂ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸುತ್ತಿರುವುದರಿಂದ ಹೈಕೋರ್ಟ್‌ನಲ್ಲಿ ವಕೀಲರ ಹಾಗೂ ಕಕ್ಷಿದಾರರ ಸಂಖ್ಯೆ ವಿರಳವಾಗಿತ್ತು.

ಭೇಟಿಗೆ ಸೀಮಿತ ಅವಕಾಶ

ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಬಿಬಿಎಂಪಿ ಕೇಂದ್ರ ಕಚೇರಿಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಮಾತ್ರ ಭೇಟಿ ಕೊಡಬಹುದು ಎಂದು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಕೆಲಸದ ದಿನಗಳಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ನಡುವೆ ಮಾತ್ರ ಪಾಲಿಕೆ ಕೇಂದ್ರ
ಕಚೇರಿಗೆ ಭೇಟಿ ಕೊಡಬಹುದು. ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸುತ್ತೋಲೆಯನ್ನು ಮಂಗಳವಾರ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.