ADVERTISEMENT

ಲಾಕ್‌ಡೌನ್‌ ಬಿಸಿ: ಮೂರು ದಿನ ಟ್ರ್ಯಾಕ್ಟರ್‌ ಪ್ರಯಾಣ, ಊರು ಸೇರಿದ ಕಾರ್ಮಿಕ ದಂಪತಿ

ಕೊರೊನಾ ಭೀತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 21:10 IST
Last Updated 2 ಏಪ್ರಿಲ್ 2020, 21:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಭೀತಿಯಿಂದ ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ರಾತ್ರೋರಾತ್ರಿ ಬೆಂಗಳೂರು ತೊರೆದ ಕೂಲಿಕಾರ್ಮಿಕ ದಂಪತಿ ಟ್ರ್ಯಾಕ್ಟರ್‌ನಲ್ಲಿ ಕುಳಿತು ಸತತ ಮೂರು ದಿನ ಬಿರುಬಿಸಿನಲ್ಲಿ ಪ್ರಯಾಣಿಸಿ ರಾಯಚೂರು ಬಳಿಯ ತಮ್ಮ ಹಳ್ಳಿ ಸೇರಿದ್ದಾರೆ.

ಕೂಲಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಆಂಧ್ರದ ಗಡಿಯಲ್ಲಿರುವ ರಾಯಚೂರು ಬಳಿಯ ಹಳ್ಳಿಯ ನಾಗಮ್ಮ ಮತ್ತು ಮಲ್ಲಪ್ಪ ದಂಪತಿಮೂರ‍್ನಾಲ್ಕು ವರ್ಷಗಳಿಂದ ಇಲ್ಲಿಯೇ ನೆಲೆ ನಿಂತಿದ್ದರು. ಕಟ್ಟಡ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಈ ಕುಟುಂಬ ನಿರ್ಮಾಣ ಹಂತದ ಕಟ್ಟದಲ್ಲಿಯೇ ವಾಸವಾಗಿತ್ತು. ಈ ದಂಪತಿಯ ಜೊತೆ ಅವರ ಅನೇಕ ಸಂಬಂಧಿಕರು ಕೂಡ ಇಲ್ಲಿಗೆ ಬಂದು, ನಗರದ ಬೇರೆ, ಬೇರೆ ಕಡೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.

ಊರಲ್ಲಿ ಸ್ವಂತ ಮನೆ ಮತ್ತು ಜಮೀನು ಬಿಟ್ಟು ಬಂದಿದ್ದ ಈ ಜೋಡಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಲ್ಲೇಶ್ವರದ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಾಗಿತ್ತು. ಮಗಳು ಐಶ್ವರ್ಯ ಮತ್ತು ಮಗ ಶಿವುನನ್ನು ಸಮೀಪದ ಅಂಗನವಾಡಿ ಸೇರಿಸಿದ್ದರು. ಈ ನಡುವೆ ಮಗ ಹುಷಾರಿಲ್ಲದೆ ಆಸ್ಪತ್ರೆ ಸೇರಿದ್ದ. ದಂಪತಿಯನ್ನು ಕೂಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ಮೇಸ್ತ್ರಿ ಆಸ್ಪತ್ರೆಯ ಖರ್ಚಿಗೆ ಹಣ ನೀಡಲಿಲ್ಲ. ಕೊನೆಗೆ ಅಕ್ಕಪಕ್ಕದವರು ಔಷಧಿ ಮತ್ತು ಆಸ್ಪತ್ರೆ ಖರ್ಚು ಭರಿಸಿದ್ದರು. ಬಿಡುವಿನ ಸಮಯದಲ್ಲಿ ನಾಗಮ್ಮ ಮನೆಗೆಲಸ ಮಾಡಿ ಆ ಹಣದ ಋಣ ತೀರಿಸಿದ್ದಳು.

ADVERTISEMENT

ಮಗ ಹುಷಾರಾಗಿ ಮನೆಗೆ ಬಂದ ಎಂದುಕೊಳ್ಳುವಷ್ಟರಲ್ಲಿ ಕೊರೊನಾ ಭೀತಿ ಆವರಿಸಿತು. ಲಾಕ್‌ಡೌನ್‌ನಿಂದ ಕೆಲಸ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಯಿತು. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸಿತು. ‘ಕೈಯಲ್ಲಿ ಕೆಲಸ ಇಲ್ಲ. ಇಲ್ಲಿಯೇ ಇದ್ದರೆ ಉಪವಾಸ ಸಾಯುತ್ತೇವೆ. ನಮ್ಮ ಊರಿನಲ್ಲಾದರೆ ಗಂಜಿ ಕುಡಿದಾದರೂ ಬದುಕುತ್ತೇವೆ. ಸಾಯುವುದಾದರೆ ಅಲ್ಲಿಯೇ ಸಾಯೋಣ. ಮೊದಲು ನಮ್ಮ ಊರು ಸೇರೋಣ’ ಎಂದು ನಿರ್ಧರಿಸಿದ ದಂಪತಿ ಊರಿಗೆ ಹೊರಡಲು ಸಿದ್ಧರಾದರು.

ಲಾಕ್‌ಡೌನ್‌ನಿಂದ ಊರು ತಲುಪಲು ಬಸ್‌, ರೈಲು ಇರಲಿಲ್ಲ. ಮಲ್ಲಪ್ಪ ಅದು ಹೇಗೊ ಯಶವಂತಪುರದ ಮಾರುಕಟ್ಟೆಗೆ ಸರಕು ಹೇರಿಕೊಂಡು ಬಂದಿದ್ದ ರಾಯಚೂರಿನ ಟ್ರ್ಯಾಕ್ಟರ್‌ ಪತ್ತೆ ಹಚ್ಚಿದ.ಟ್ರ್ಯಾಕ್ಟರ್‌ ಚಾಲಕನಿಗೆ ಹಣ ನೀಡಿ ಸಮಯ ನಿಗದಿ ಮಾಡಿಕೊಂಡ.

ಪೊಲೀಸರ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ರಾತ್ರಿ ಯಶವಂತಪುರದಿಂದ ಹೊರಡುವುದಾಗಿ ಚಾಲಕ ಹೇಳಿದ್ದ. ಗಂಟು, ಮೂಟೆ ಕಟ್ಟಿಕೊಂಡು ಪುಟ್ಟ ಮಕ್ಕಳೊಂದಿಗೆ ಕಾಲ್ನಡಿಗೆಯಲ್ಲಿರಾತ್ರಿ ಹತ್ತು ಗಂಟೆಗೆ ಯಶವಂತಪುರ ತಲುಪಿದ ದಂಪತಿ ಅಲ್ಲಿ ತಮಗಾಗಿ ಕಾಯುತ್ತಿದ್ದ ಟ್ರ್ಯಾಕ್ಟರ್‌ ಏರಿದರು. ಇನ್ನೂ ಅನೇಕರು ಅದರಲ್ಲಿದ್ದರು.

ಸುಡುವ ಬಿಸಿಲಿನಲ್ಲಿಸತತ ಮೂರು ದಿನ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಮಾಡಿದದಂಪತಿ ಸುರಕ್ಷಿತವಾಗಿ ಮಕ್ಕಳೊಂದಿಗೆ ಊರು ಸೇರಿದ್ದಾರೆ. ಬೆಂಗಳೂರಿನ ಅಕ್ಕಪಕ್ಕದ ಮನೆಯವರಿಗೆ ಫೋನ್‌ ಮಾಡಿ ದಾರಿಯುದ್ದಕ್ಕೂ ಅನುಭವಿಸಿದ ಯಾತನೆಯನ್ನು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.