ADVERTISEMENT

ಬಿಬಿಎಂಪಿ ಕಂದಾಯ ಅಧಿಕಾರಿಗೆ ನಾಲ್ಕು ವರ್ಷ ಜೈಲು

ಖಾತೆ ಬದಲಾವಣೆಗೆ ₹ 1 ಲಕ್ಷ ಲಂಚ ಪಡೆದ ಅಪರಾಧ ಸಾಬೀತು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:17 IST
Last Updated 30 ಆಗಸ್ಟ್ 2021, 16:17 IST
ಲಂಚ–ಪ್ರಾತಿನಿಧಿಕ ಚಿತ್ರ
ಲಂಚ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸ್ಥಿರಾಸ್ತಿಯ ಖಾತೆ ಬದಲಾವಣೆ ಪ್ರಕ್ರಿಯೆ ನಡೆಸಲು ₹ 1 ಲಕ್ಷ ಲಂಚ ಪಡೆದಿದ್ದ ಪ್ರಕರಣದಲ್ಲಿ ಬಿಬಿಎಂಪಿ ಮಹಾಲಕ್ಷ್ಮಿಪುರ ವಾರ್ಡ್‌ ಸಹಾಯಕ ಕಂದಾಯ ಅಧಿಕಾರಿ ಲಿಂಗಯ್ಯ, ಅಪರಾಧಿ ಎಂದು ಸಾರಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ, ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ₹ 3 ಲಕ್ಷ ದಂಡ ವಿಧಿಸಿದೆ.

ತಮ್ಮ ಸ್ನೇಹಿತರ ಸ್ಥಿರಾಸ್ತಿಯೊಂದರ ಖಾತೆ ಬದಲಾವಣೆಗಾಗಿ ಸುಂಕದ ಕಟ್ಟೆಯ ಶ್ರೀಗಂಧದ ಕಾವಲ್‌ ನಿವಾಸಿಯೊಬ್ಬರು 2017ರ ಮಾರ್ಚ್‌ನಲ್ಲಿ ಬಿಬಿಎಂಪಿಯ ಮಹಾಲಕ್ಷ್ಮಿಪುರ ವಾರ್ಡ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ₹ 2.5 ಲಕ್ಷ ಲಂಚ ನೀಡುವಂತೆ ಲಿಂಗಯ್ಯ ಬೇಡಿಕೆ ಇಟ್ಟಿದ್ದರು.

ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು. 2017ರ ಮಾರ್ಚ್‌ 28ರಂದು ₹ 1 ಲಕ್ಷ ಲಂಚ ಪಡೆಯುತ್ತಿದ್ದಾಗ ಸಹಾಯಕ ಕಂದಾಯ ಅಧಿಕಾರಿಯನ್ನು ಎಸಿಬಿ ಬಂಧಿಸಿತ್ತು. ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, 2017ರಲ್ಲೇ ಲಿಂಗಯ್ಯ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ಮೂರು ವರ್ಷಗಳಿಂದಲೂ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಸೋಮವಾರ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶರು, ‘ಲಂಚ ಪ್ರಕರಣದಲ್ಲಿ ಲಿಂಗಯ್ಯ ದೋಷಿ’ ಎಂದು ಸಾರಿದರು. ಅಪರಾಧಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು ₹ 3 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.