ADVERTISEMENT

ಭ್ರಷ್ಟಾಚಾರ ಆರೋಪ: ನಿರ್ಲಕ್ಷ್ಯ ಸಲ್ಲ; ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 14:30 IST
Last Updated 3 ಅಕ್ಟೋಬರ್ 2025, 14:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಭ್ರಷ್ಟಾಚಾರ ಆರೋಪದ ಮೇಲಿನ ದುರ್ನಡತೆ ಪ್ರಕರಣಗಳನ್ನು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ಹಗುರವಾಗಿ ಪರಿಗಣಿಸಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಭ್ರಷ್ಟಾಚಾರದ ಆರೋಪದಡಿ ಗ್ರಾಮ ಲೆಕ್ಕಿಗರೊಬ್ಬರನ್ನು ಕಡ್ಡಾಯ ನಿವೃತ್ತಿಗೊಳಿಸಿ ಹೊರಡಿಸಿದ್ದ ಅದೇಶವನ್ನು ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ) ರದ್ದುಗೊಳಿಸಿತ್ತು‌. ಇದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಮತ್ತು ನ್ಯಾಯಮೂರ್ತಿ ವಿಜಯ ಕುಮಾರ್‌ ಎ.ಪಾಟೀಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಕೆಎಟಿ ಆದೇಶವನ್ನು ವಜಾಗೊಳಿಸಿದೆ.

‘‘ಭ್ರಷ್ಟಾಚಾರವು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ಬೆದರಿಕೆ ಹಾಕುವುದಲ್ಲದೆ, ಕಾನೂನಿನ ನಿಯಮ ಮತ್ತು ಅದರ ರಕ್ಷಕರಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಅಪಾಯವಿದೆ. ಲಂಚದ ಆರೋಪ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮೌನ ವಹಿಸಬಾರದು" ಎಂದು ಎಚ್ಚರಿಸಿದೆ.

ADVERTISEMENT

"ಈ ಪ್ರಕರಣದಲ್ಲಿ ಕೆಎಟಿ ತಪ್ಪೆಸಗಿದೆ. ಕ್ರಿಮಿನಲ್‌ ಪ್ರಕರಣವೇ ಬೇರೆ ಮತ್ತು ಇಲಾಖಾ ತನಿಖೆಯೇ ಬೇರೆ. ಕೆಎಟಿ ಇಲಾಖಾ ತನಿಖೆಯಲ್ಲಿನ ಅಂಶಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ಸರ್ಕಾರದ ಪರ ಜಿ.ಕೆ.ಹಿರೇಗೌಡರ್ ವಾದ ಮಂಡಿಸಿದ್ದರು.

ಪ್ರಕರಣವೇನು?: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆಳವಡಿ ಗ್ರಾಮದಲ್ಲಿ ವಿ.ಶಿವನಗೌಡ ಗ್ರಾಮ ಲೆಕ್ಕಿಗನಾಗಿ 2011ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

"ಕಂದಾಯ ದಾಖಲೆಗಳನ್ನು ಸರಿಪಡಿಸಲು ಶಿವನಗೌಡ ₹2,500 ಲಂಚ ಕೇಳಿದ್ದರು" ಎಂದು ವಿಜಯಕುಮಾರ್‌ ಹನಮಪ್ಪ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಶಿವನಗೌಡ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರ ವಿರುದ್ಧ ಜಿಲ್ಲಾಧಿಕಾರಿ ಇಲಾಖಾ ತನಿಖೆ ನಡೆಸಿದ್ದರು. ತನಿಖಾ ವರದಿಯನ್ನು 2019ರಲ್ಲಿ ಸಲ್ಲಿಸಲಾಗಿತ್ತು. ಆನಂತರ ಸರ್ಕಾರ ತನಿಖಾ ವರದಿ ಆಧರಿಸಿ 2020ರ ಅಕ್ಟೋಬರ್ 21ರಂದು ಸೇವೆಯನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.