ADVERTISEMENT

ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ: ‘ನ್ಯಾಯಾಂಗದ ಮೇಲೆ ಒತ್ತಡ ತಂದಿಲ್ಲ’

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 19:39 IST
Last Updated 11 ಸೆಪ್ಟೆಂಬರ್ 2019, 19:39 IST

ಬೆಂಗಳೂರು: ‘ಹೊಸನಗರ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಇತ್ತೀಚೆಗಷ್ಟೇ ನ್ಯಾಯಮೂರ್ತಿ ಪಿ.ಎಂ.ನವಾಜ್ ಹಿಂದೆ ಸರಿಯಲು ಶ್ರೀಮಠ ಕಾರಣವಲ್ಲ’ ಎಂದು ಮಠದ ಪ್ರಕಟಣೆ ತಿಳಿಸಿದೆ.

‘ನವಾಜ್ ಅವರು, ಈ ಹಿಂದೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‍ಪಿಪಿ) ಆಗಿದ್ದ ಸಂದರ್ಭದಲ್ಲಿ ಶ್ರೀಮಠದ ವಿರುದ್ಧ ವಾದ ಮಂಡಿಸಿದ್ದ ಕಾರಣಕ್ಕಾಗಿ ಈಗ ವಿಚಾರಣೆಯಿಂದ ಹಿಂದೆ ಸರಿದಿರಬಹುದು’ ಎಂದು ಮಠದ ಮಾಧ್ಯಮ ಸಂಯೋಜಕ ಉದಯಶಂಕರ ಭಟ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಮಚಂದ್ರಾಪುರ ಮಠ ಅಥವಾ ಶ್ರೀಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯಲು ಶ್ರೀಮಠ ಯಾವುದೇ ಒತ್ತಡ ತಂದಿಲ್ಲ. ಪ್ರತಿಬಾರಿ ಯಾರಾದರೂ ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿದಾಗಲೆಲ್ಲ, ಅದಕ್ಕೆ ಪ್ರತಿವಾದಿಗಳು ಒತ್ತಡ ತಂದಿರುವುದೇ ಕಾರಣ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಕೆಲವರು ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದರೆ, ಇನ್ನುಳಿದ ನ್ಯಾಯಮೂರ್ತಿಗಳು ಶ್ರೀಮಠದ ಶಿಷ್ಯ-ಭಕ್ತರು ಎಂಬ ಕಾರಣಕ್ಕೆ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ’ ಎಂದರು. ‘ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ವಿರುದ್ಧ ಪ್ರತಿವಾದಿಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮತ್ತು ರಾಷ್ಟ್ರಪತಿಯವರಿಗೆ ದೂರು ನೀಡಿದ್ದರು’ ಎಂದೂ ಅವರು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.