ADVERTISEMENT

ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ವಿದ್ಯಾರ್ಥಿನಿ ಸಾವು

ಮಂಗಳೂರು ಕಾಲೇಜಿನಲ್ಲಿ ಓದುತ್ತಿದ್ದ ಬಳ್ಳಾರಿ ಯುವತಿ| ಪಿಎಸ್‌ಐ ಮನೆಯಲ್ಲಿ ಉಳಿದುಕೊಂಡಿದ್ದ ಆಯಿಶಾ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 21:47 IST
Last Updated 30 ಏಪ್ರಿಲ್ 2023, 21:47 IST
   

ಬೆಂಗಳೂರು: ಬಿನ್ನಿ ಮಿಲ್ ಬಳಿಯ ಪೊಲೀಸ್ ಕ್ವಾರ್ಟರ್ಸ್‌ ಕಟ್ಟಡದ 7ನೇ ಮಹಡಿಯಿಂದ ಬಿದ್ದು ಬಿ.ಆರ್. ಆಯಿಶಾ (20) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಳ್ಳಾರಿ ಜಿಲ್ಲೆಯ ಆಯಿಶಾ, ಮಂಗಳೂರಿನ ಕಾಲೇಜೊಂದರಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಸ್ನೇಹಿತರಾಗಿದ್ದ ಪಿಎಸ್‌ಐ ಭೀಮೇಶ್ ನಾಯಕ್ ಅವರ ಮನೆಗೆ ಏಪ್ರಿಲ್ 24ರಂದು ಬಂದು ಉಳಿದುಕೊಂಡಿದ್ದರು. ಕ್ವಾರ್ಟರ್ಸ್‌ ಕಟ್ಟಡದಿಂದ ಬಿದ್ದು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಯಾರಾದರೂ ತಳ್ಳಿ ಕೊಲೆ ಮಾಡಿದ್ದಾರೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಆಯಿಶಾ ಬರೆದಿದ್ದಾರೆ ಎನ್ನಲಾದ ಮರಣಪತ್ರ ಸಿಕ್ಕಿದೆ. ಅದರಲ್ಲಿರುವ ಸಂಗತಿಗಳನ್ನು ಪರಿಶೀಲಿಸಲಾಗುತ್ತಿದೆ. ಮರಣಪತ್ರವನ್ನು ಕೈ ಬರಹ ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

ಪೋಕ್ಸೊ ದೂರು ನೀಡಿದ್ದ ಆಯಿಶಾ: ‘ರಾಯಚೂರಿನ ಭೀಮೇಶ್ ನಾಯಕ್, ಸಿಐಡಿಯಲ್ಲಿ ಪಿಎಸ್‌ಐ ಆಗಿದ್ದಾರೆ. ಹಲವು ವರ್ಷಗಳ ಹಿಂದೆಯೇ ಅವರಿಗೆ ಆಯಿಶಾ ಪರಿಚಯವಾಗಿತ್ತು. ಸಲುಗೆಯೂ ಬೆಳೆದಿತ್ತು ಎನ್ನಲಾಗಿದೆ. ಭೀಮೇಶ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದ ಆಯಿಶಾ, ಎರಡು ವರ್ಷಗಳ ಹಿಂದೆ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಭೀಮೇಶ್ ಅವರನ್ನು ಬಂಧಿಸಿದ್ದರು. ಕೆಲ ತಿಂಗಳು ಜೈಲಿನಲ್ಲಿದ್ದ ಭೀಮೇಶ್, ಪ್ರಕರಣವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ, ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿರುವುದು ಗೊತ್ತಾಗಿದೆ. ಇದಾದ ಬಳಿಕ ಭೀಮೇಶ್ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು. ಪೊಲೀಸ್ ವಸತಿ ಸಮುಚ್ಚಯದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು’ ಎಂದು ತಿಳಿಸಿದರು.

ಸಲುಗೆ ಮುಂದುವರಿಸಿದ್ದ ಆಯಿಶಾ: ‘ಪ್ರಕರಣ ರದ್ದಾದ ನಂತರವೂ ಭೀಮೇಶ್ ಜೊತೆ ಆಯಿಶಾ ಮಾತನಾಡಲಾರಂಭಿಸಿದ್ದರು. ಪುನಃ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇಬ್ಬರೂ ಹಲವೆಡೆ ಸುತ್ತಾಡುತ್ತಿದ್ದರು. ಆಯಿಶಾ ಆಗಾಗ ಬೆಂಗಳೂರಿಗೆ ಬಂದು ಪಿಎಸ್‌ಐ ಜೊತೆ ಉಳಿದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಏಪ್ರಿಲ್ 24ರಂದು ಬೆಂಗಳೂರಿಗೆ ಬಂದಿದ್ದ ಆಯಿಶಾ, ಪಿಎಸ್ಐ ಮನೆಯಲ್ಲಿದ್ದರು. ಅಕ್ಕ–ಪಕ್ಕದ ನಿವಾಸಿಗಳಿಗೂ ವಿಷಯ ಗೊತ್ತಿತ್ತು. ಯಾರೋ ಸಂಬಂಧಿಕರು ಇರಬಹುದೆಂದು ಸುಮ್ಮನಾಗಿದ್ದರು. ಆಯಿಶಾ ಮೃತಪಟ್ಟ ಬಳಿಕವೇ, ಅವರಿಬ್ಬರ ಬಗ್ಗೆ ಸ್ಥಳೀಯರಿಗೆ ಗೊತ್ತಾಗಿದೆ’ ಎಂದು ತಿಳಿಸಿದರು.

‘ಸಾವಿನ ಬಗ್ಗೆ ಪಿಎಸ್ಐ ಭೀಮೇಶ್ ಮೇಲೂ ಅನುಮಾನವಿದ್ದು, ಅವರನ್ನೂ ವಿಚಾರಣೆ ನಡೆಸಲಾಗುವುದು. ಸ್ಥಳೀಯರಿಂದ ಈಗಾಗಲೇ ಹೇಳಿಕೆ ಪಡೆಯಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದರು.

‘ಕೈ ಮೇಲೆ ಪಿಎಸ್‌ಐ ಹೆಸರು’

‘ಆಯಿಶಾ ಕೈ ಮೇಲೆ ಪಿಎಸ್ಐ ಭೀಮೇಶ್ ನಾಯಕ್ ಹೆಸರು ಹಾಗೂ ಮೊಬೈಲ್ ನಂಬರ್ ಬರೆಯಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣದಲ್ಲಿ ಪಿಎಸ್ಐ ಪಾತ್ರವಿರುವ ಸಂಶಯವಿದೆ. ಹೀಗಾಗಿ, ಸಂಬಂಧಿಕರು ನೀಡುವ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ಸುಳ್ಳು ದೂರಿನಿಂದ ಪಶ್ಚಾತಾಪ’

‘ಭೀಮೇಶ್ ನಾಯಕ್ ನನ್ನ ಆಪ್ತ ಸ್ನೇಹಿತ. ತುಂಬಾ ಸೂಕ್ಷ್ಮ ಹಾಗೂ ಮುಗ್ಧ ವ್ಯಕ್ತಿ. ಇವರ ವಿರುದ್ಧ ಸುಳ್ಳು ದೂರು ನೀಡಿದೆ. ನನ್ನಿಂದಾಗಿ ಅವರ ಕುಟುಂಬಕ್ಕೆ ತೊಂದರೆ ಆಯಿತು. ಇದಕ್ಕಾಗಿ ತುಂಬಾ ಪಶ್ಚಾತ್ತಾಪಪಡುತ್ತಿದ್ದೇನೆ’ ಎಂದು ಆಯಿಶಾ ಮರಣಪತ್ರದಲ್ಲಿ ಬರೆದಿದ್ದಾರೆಂದು ಗೊತ್ತಾಗಿದೆ.

‘ಸ್ನೇಹಿತನಿಗೆ ಅನ್ಯಾಯ ಮಾಡಿದೆ ಎಂದು ಕೊರಗುತ್ತಿದ್ದೇನೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ
ಯಾರೂ ಕಾರಣವಲ್ಲ. ಭೀಮೇಶ್ ನಾಯಕ್ ಅವರಿಗೂ ನನ್ನ
ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ’ ಎಂದೂ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ. ಆದರೆ, ಮರಣಪತ್ರದ ಬಗ್ಗೆಯೂ ಪೊಲೀಸರು
ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.