ADVERTISEMENT

ಪರಿಷತ್ತಿಗೆ ಒಳಗೊಳ್ಳುವ ಗುಣ ಇರಲಿ: ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ

ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 16:27 IST
Last Updated 12 ಮಾರ್ಚ್ 2023, 16:27 IST
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷೆ ಎಚ್.ಎಸ್. ಶ್ರೀಮತಿ ಅವರನ್ನು ಸನ್ಮಾನಿಸಲಾಯಿತು. ಬಿ.ಆರ್. ರವಿಕಾಂತೇಗೌಡ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಮುಖ್ಯಮಂತ್ರಿ ಕಾರ್ಯದರ್ಶಿ ಜಯರಾಮ್ ರಾಯ್‌ಪುರ ಹಾಗೂ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಇದ್ದಾರೆ.
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷೆ ಎಚ್.ಎಸ್. ಶ್ರೀಮತಿ ಅವರನ್ನು ಸನ್ಮಾನಿಸಲಾಯಿತು. ಬಿ.ಆರ್. ರವಿಕಾಂತೇಗೌಡ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಮುಖ್ಯಮಂತ್ರಿ ಕಾರ್ಯದರ್ಶಿ ಜಯರಾಮ್ ರಾಯ್‌ಪುರ ಹಾಗೂ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಇದ್ದಾರೆ.   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಜವಾಬ್ದಾರಿ ಹೊತ್ತ ಸೇವಕರಿಗೆ ಒಳಗೊಳ್ಳುವ ಗುಣ ಇರಬೇಕು. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದವರು ಮೌನವಹಿಸಿದರೆ ಸರ್ವಾಧಿಕಾರಿ, ದುರಹಂಕಾರಿ ಪ್ರವೃತ್ತಿ ಬೆಳೆಯುತ್ತದೆ’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪರಿಷತ್ತಿನ ಸದಸ್ಯತ್ವ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ಹೆಸರು ಉಲ್ಲೇಖಿಸದೇ, ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಹಮ್ಮಿಕೊಂಡ 16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದೂ ಪರಿಷತ್ತನ್ನು ದುರ್ಬಳಕೆ ಮಾಡಿಕೊಂಡಿರಲಿಲ್ಲ. ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದ ಜಿ. ನಾರಾಯಣ ಅಂತವರು ಪರಿಷತ್ತಿನ ಅಧ್ಯಕ್ಷರಾದಾಗ ಕಿಂಚಿತ್ತೂ ರಾಜಕೀಯ ಸುಳಿಯದಂತೆ ನಡೆದುಕೊಂಡರು. ಇಂತಹ ಸಾಹಿತ್ಯ ಪರಿಷತ್ತಿಗೆ ಈಗ ಏನಾಗಿದೆ’ ಎಂದು ಪ್ರಶ್ನಿಸಿದರು.

‘ಬಹುತ್ವದ ಭಾರತದಲ್ಲಿ ಬಂಧುತ್ವವನ್ನು ಕಟ್ಟಿಕೊಂಡು ಬಾಳಲಾಗುತ್ತಿದೆ. ಸಾಹಿತ್ಯ ಪರಿಷತ್ತು ಸಹ ಪ್ರಶ್ನಿಸಿದವರನ್ನು ದ್ವೇಷಿಸದೆ, ಒಳಗೊಳ್ಳುವ ವಿವೇಕ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯವು ‘ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ...’ ಎಂಬ ಆಶಯವನ್ನು ಕಟ್ಟಿಕೊಟ್ಟಿದೆ. ಆದ್ದರಿಂದ ಕನ್ನಡಿಗರು ದುರಂಕಾರಿ, ಸರ್ವಾಧಿಕಾರಿ ನಡೆಯನ್ನು ಪ್ರತಿರೋಧಿಸುವ ಮೂಲಕ ಜಾಗೃತಿಯನ್ನು ಪ್ರದರ್ಶಿಸಬೇಕು’ ಎಂದು ತಿಳಿಸಿದರು.‌

ಕೇಂದ್ರ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ, ‘ಅಧಿಕಾರ ಇದ್ದಾಗ ಅಹಂಕಾರ ರೂಢಿಸಿಕೊಳ್ಳದೆ, ಸೇವೆ ನೀಡಬೇಕೆಂಬ ವಿವೇಕವನ್ನು ಕನ್ನಡ ಸಾಹಿತ್ಯ ಬೆಳೆಸುತ್ತದೆ. ಅಂತಹ ವಿವೇಕವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.