ADVERTISEMENT

ಪಾಕಿಸ್ತಾನ ದಂಪತಿ ಗಡಿಪಾರು ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 20:10 IST
Last Updated 8 ಮೇ 2019, 20:10 IST

ಬೆಂಗಳೂರು: ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದು ಮದುವೆಯಾಗಿ ಇಲ್ಲೇ ನೆಲೆಸಿ, ಜೈಲು ಶಿಕ್ಷೆಗೆ ಗುರಿಯಾಗಿರುವ ದಂಪತಿಯನ್ನು ಗಡಿಪಾರು ಮಾಡಲು ನೀಡಲಾಗಿದ್ದ ಅವಧಿಯನ್ನು ಹೈಕೋರ್ಟ್‌ ಮತ್ತೆ 10 ದಿನ ವಿಸ್ತರಿಸಿದೆ.

ಈ ಕುರಿತಂತೆ ಕಾಲಾವಕಾಶ ಕೋರಿ ಕೇಂದ್ರ ಸರ್ಕಾರದ ಪರ ವಕೀಲ ಆದಿತ್ಯ ಸಿಂಗ್‌ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೋರ್ಟ್‌ಗೆ ಹಾಜರಾಗಿದ್ದ ‘ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ’ಯ (ಎಫ್‌ಆರ್‌ಆರ್‌ಒ) ಅಧಿಕಾರಿ ಲಾಬೂರಾಮ್‌, ದಂಪತಿಯನ್ನು ವಾಘಾ ಗಡಿಯಲ್ಲಿ ಬಿಟ್ಟುಬರುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

ಈ ಸಂಬಂಧ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಇಲಾಖೆ ಉಪ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಎಫ್‌ಆರ್‌ಆರ್ ಮಧ್ಯೆ ನಡೆಸಲಾಗಿರುವ ಸಂವಹನದ ವಿವರಗಳನ್ನು ಪ್ರಮಾಣಪತ್ರದ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಗಡುವು ವಿಸ್ತರಿಸಿದೆ.

ಪ್ರಕರಣವೇನು?: ಕರಾಚಿ ಜಿಲ್ಲೆಯ ಚಕ್ರಘೋತ್‌ನ ಕಾಸಿಫ್‌ ಶಂಸುದ್ದೀನ್‌ ಅಲಿಯಾಸ್‌ ಕಾಸಿಫ್‌ (30) ಮತ್ತು ಕೋರಂಗಿಯ ಕಿರಣ್‌ ಗುಲಾಂ ಅಲಿ (30) ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಲ್ಲಿಯೇ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು. ಅಕ್ರಮವಾಗಿ ನೆಲೆಸಿದ್ದ ಇವರನ್ನು ಕುಮಾರಸ್ವಾಮಿ ಲೇ ಔಟ್ ಮತ್ತು ಬನಶಂಕರಿ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು. ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ವಿದೇಶಿಯರ ಕಾಯ್ದೆ ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ್ದ 44ನೇ ಎಸಿಎಂಎಂ ನ್ಯಾಯಾಲಯ, ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ 21 ಮತ್ತು 12 ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಅಂತೆಯೇ 60 ಸಾವಿರಕ್ಕೂ ಹೆಚ್ಚು ಮೊತ್ತದ ದಂಡ ವಿಧಿಸಿತ್ತು. 21 ಮತ್ತು 12 ತಿಂಗಳ ಜೈಲು ಶಿಕ್ಷೆಯನ್ನು ಪ್ರ‌ತ್ಯೇಕವಾಗಿ ಅನುಭವಿಸಬೇಕು ಎಂದು ಆದೇಶಿಸಿತ್ತು. ಅರ್ಜಿದಾರ ದಂಪತಿ ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಕುರಿತಂತೆ ಕಳೆದ ವಿಚಾರಣೆ ವೇಳೆ ನ್ಯಾಯಾಲಯ, ‘ದಂಪತಿಯನ್ನು 2019ರ ಮೇ 5ರೊಳಗೆ ಪಾಕಿಸ್ತಾನಕ್ಕೆ ಕಳುಹಿಸಲು ಎಲ್ಲ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿತ್ತು.

‘ನಿಗಾ ವಹಿಸಲಾಗಿದೆ’
‘ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸರ್ಕಾರವು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ’ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಮುಚ್ಚಿದ ಲಕೋಟೆಯಲ್ಲಿ ಎಫ್‌ಆರ್‌ಆರ್‌ ನೀಡಿರುವ ವಿವರವನ್ನು ಪರಿಶೀಲಿಸಿರುವ ನ್ಯಾಯಪೀಠ, ವಿದೇಶದಿಂದ ಭಾರತಕ್ಕೆ ಬರುವ ನಿರ್ದಿಷ್ಟ ಸಮುದಾಯದ ಜನರಿಗೆ ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ‘ಅನ್ಸರ್‌ ಉಲ್‌ ಇಸ್ಲಾಂ ಮಹಲ್ಲು ಸಮಿತಿ‘ ಮದುವೆ ಪ್ರಮಾಣ ಪತ್ರಗಳನ್ನು ನೀಡುತ್ತದೆ ಎಂಬ ಅಂಶವನ್ನು ಪ್ರಸ್ತಾಪಿಸಿದೆ.

‘ಮದುವೆ ಪ್ರಮಾಣ ಪತ್ರದ ಆಧಾರದಲ್ಲಿ ಪಾಸ್‌ಪೋರ್ಟ್‌ ಗಿಟ್ಟಿಸಿಕೊಳ್ಳುವ ಜಾಲದ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣ ನಿಗಾ ವಹಿಸಿದೆ’ ಎಂದು ಎಫ್‌ಆರ್‌ಆರ್‌ ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.