ADVERTISEMENT

ಬೆಂಗಳೂರು | ದಶಕಗಳ ಹೋರಾಟದ ಫಲ ಕೆ.ಆರ್.ಪುರದಲ್ಲಿ ನ್ಯಾಯಾಲಯ ಆರಂಭ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 21:32 IST
Last Updated 10 ಏಪ್ರಿಲ್ 2025, 21:32 IST
ಕೆ.ಆರ್.ಪುರದಲ್ಲಿ ಆರಂಭವಾಗಿರುವ ನ್ಯಾಯಾಲಯ
ಕೆ.ಆರ್.ಪುರದಲ್ಲಿ ಆರಂಭವಾಗಿರುವ ನ್ಯಾಯಾಲಯ   

ಕೆ.ಆರ್.ಪುರ: ಇಪ್ಪತ್ತು ವರ್ಷಗಳ ಹೋರಾಟದ ಫಲವಾಗಿ ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರದಲ್ಲಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ (ಗ್ರಾಮಾಂತರ) ಆರಂಭಗೊಂಡಿದ್ದು, ಎರಡು ದಿನಗಳಿಂದ ಕಲಾಪಗಳು ನಡೆಯುತ್ತಿವೆ.  

ಕೆ.ಆರ್.ಪುರ, ವರ್ತೂರು, ಬಿದರಹಳ್ಳಿ ಹೋಬಳಿಗಳ ಹಾಗೂ ವರ್ತೂರು,ವೈಟ್‌ಫೀಲ್ಡ್‌, ಕಾಡುಗೋಡಿ,ಆವಲಹಳ್ಳಿ ಹಾಗೂ ವೈಟ್ ಫೀಲ್ಡ್ ಸಂಚಾರ ಠಾಣೆಯ ಮೊಕದ್ದಮೆಗಳು ನ್ಯಾಯಾಲಯ ವ್ಯಾಪ್ತಿಯಲ್ಲಿ ಸೇರಿವೆ. ಸುಮಾರು 8 ಸಾವಿರ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿವೆ. ಇನ್ನು ಮುಂದೆ ಈ ನ್ಯಾಯಾಲಯದಲ್ಲಿಯೇ ಮೊಕ್ಕದಮೆಗಳ ನಡೆಯಲಿವೆ.

2003 ರಲ್ಲಿ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತು. ಅಧಿಸೂಚನೆ ಅನ್ವಯ ದೇವನಹಳ್ಳಿ, ಆನೇಕಲ್, ನೆಲಮಂಗಲ, ಮಾಲೂರು, ಹೊಸಕೋಟೆ ಕಡೆ ನ್ಯಾಯಾಲಯ ಆರಂಭಗೊಂಡವು. ಆದರೆ, ಕೆ.ಆರ್.ಪುರದಲ್ಲಿ ಕಟ್ಟಡ ಹಾಗೂ ಎಲ್ಲಾ ರೀತಿಯ ಮೂಲಸೌಕರ್ಯಗಳಿದ್ದರೂ ಕಾರಣಾಂತರಗಳಿಂದ ನ್ಯಾಯಾಲಯ ಸ್ಥಾಪನೆಯಾಗದೇ ನೆನಗುದಿಗೆ ಬಿದ್ದಿತ್ತು.

ADVERTISEMENT

‘ನ್ಯಾಯಾಲಯ ಪ್ರಾರಂಭಕ್ಕಾಗಿ 2004 ರಿಂದಲೂ ಸತತವಾಗಿ ನ್ಯಾಯಾಂಗ ಇಲಾಖೆ ಹಾಗೂ ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿದ್ದೇವೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು, ಕನ್ನಡಪರ, ಮಹಿಳಾ, ದಲಿತ ಸಂಘಟನೆಗಳು ಹಾಗೂ ಈ ಭಾಗದ ನಾಗರಿಕರು ನಮ್ಮ ಹೋರಾಟಕ್ಕೆ ಕೈಜೋಡಿಸಿದ್ದಾರೆ’ ಎಂದು ಬೆಂಗಳೂರು ಪೂರ್ವ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಮುನಿಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.