ADVERTISEMENT

ಬಾಡಿಗೆ ವಿಚಾರಕ್ಕಾಗಿ ಕೊಲೆ: ಅ‍ಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 19:07 IST
Last Updated 6 ಅಕ್ಟೋಬರ್ 2019, 19:07 IST
.
.   

ಬೆಂಗಳೂರು: ಲಗೇಜು ವಾಹನ ಬಾಡಿಗೆ ವಿಚಾರವಾಗಿ ಅವಿನಾಶ್ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿ ಸುರೇಶ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 64ನೇ ಸಿಸಿಎಚ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನುನ್ಯಾಯಾಧೀಶ ಬಿ. ವೆಂಕಟೇಶ್ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್‌ಶರಣಗೌಡ ಪಾಟೀಲ ವಾದಿಸಿದ್ದರು.

ಕೊಲೆಯಾದ ಅವಿನಾಶ್ ಹಾಗೂ ಅಪರಾಧಿ ಸುರೇಶ್ ಇಬ್ಬರೂ ಸ್ನೇಹಿತರು. ಲಗೇಜು ವಾಹನ ಬಾಡಿಗೆ ಹೋಗುವ ಸಂಬಂಧ ಅವರಿಬ್ಬರ ನಡುವೆ ಜಗಳವಾಗಿ ವೈಷಮ್ಯ ಬೆಳೆದಿತ್ತು.

ADVERTISEMENT

2015ರ ಡಿಸೆಂಬರ್ 4ರಂದು ರಾತ್ರಿ ಸ್ನೇಹಿತರ ಜೊತೆಯಲ್ಲಿ ಅವಿನಾಶ್, ಕತ್ರಿಗುಪ್ಪೆಯಲ್ಲಿರುವ ‘ಬರ್ಟನ್’ ಬಾರ್‌ಗೆ ಹೋಗಿದ್ದರು. ಅದೇ ಬಾರ್‌ಗೆ ಬಂದಿದ್ದ ಸುರೇಶ್, ಅವಿನಾಶ್ ಜೊತೆ ಜಗಳ ಮಾಡಿದ್ದ. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು. ಅದಾಗಿ ಕೆಲ ಗಂಟೆಗಳ ಬಳಿಕ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಅವಿನಾಶ್ ಹೋಗಿದ್ದರು. ಅಲ್ಲಿಯೇ ಇದ್ದ ಅಪರಾಧಿ ಸುರೇಶ್ ಪುನಃ ಜಗಳ ತೆಗೆದು ಹಲ್ಲೆ ಮಾಡಿದ್ದ.

ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಡಿಸೆಂಬರ್ 5ರಂದು ಮೃತಪಟ್ಟಿದ್ದರು.

ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಸುರೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.