ADVERTISEMENT

ಕೋವಿಡ್: 3ನೇ ಅಲೆಗೆ ಫನಾ ತಜ್ಞರ ವರದಿ ಸಿದ್ಧ

ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ವಿವಿಧ ಕ್ರಮಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 16:47 IST
Last Updated 3 ಆಗಸ್ಟ್ 2021, 16:47 IST

ಬೆಂಗಳೂರು: ಕೋವಿಡ್ ಮೂರನೇ ಅಲೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ (ಫನಾ) ರಚಿಸಿದ ತಜ್ಞರ ಸಮಿತಿಯು ಅಂತಿಮ ವರದಿಯನ್ನು ಸಿದ್ಧಪಡಿಸಿದೆ. ಇದನ್ನು ಸರ್ಕಾರಕ್ಕೆ ಬುಧವಾರ ಸಲ್ಲಿಸಲು ಫನಾ ತೀರ್ಮಾನಿಸಿದೆ.

ದಿವಾಕರ್ಸ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಹೇಮಾ ದಿವಾಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು 15 ಜನರನ್ನು ಒಳಗೊಂಡಿದೆ. ಸಮಿತಿಯು ಈಗಾಗಲೇ 7 ಬಾರಿ ಸಭೆ ನಡೆಸಿ, ವರದಿಯನ್ನು ಅಂತಿಮಗೊಳಿಸಿದೆ.

ಪಾರದರ್ಶಕ ವ್ಯವಸ್ಥೆ ಅಗತ್ಯ: ‘ಮೂರನೇ ಅಲೆ ಎದುರಿಸಲು ಮಾಡಿಕೊಳ್ಳಬೇಕಾದ ಸಿದ್ಧತೆಗೆ ಸಂಬಂಧಿಸಿದಂತೆ ವರದಿ ಸಿದ್ಧಗೊಂಡಿದೆ. ಎರಡನೇ ಅಲೆಯನ್ನು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಲಾಗಿದೆ. ಈ ಹಿಂದೆ ಎದುರಿಸಿದ ಸಮಸ್ಯೆಗಳು ಮುಂದೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರ ಗುರುತಿಸುವುದರಿಂದ ಈಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸುವುದು ಉತ್ತಮ. ಈ ಬಗ್ಗೆ ಸಹ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಫನಾದ ಕಾರ್ಯದರ್ಶಿ ಡಾ. ರಾಜಶೇಖರ್ ವೈ.ಎಲ್. ತಿಳಿಸಿದರು.

ADVERTISEMENT

‘ಹಾಸಿಗೆಗಳ ಹಂಚಿಕೆ, ವೈದ್ಯಕೀಯ ಆಮ್ಲಜನಕ ವಿತರಣೆ ಸೇರಿದಂತೆ ವಿವಿಧ ವೈದ್ಯಕೀಯ ವ್ಯವಸ್ಥೆಯು ಸಮರ್ಪಕವಾಗಿ ನಿರ್ವಹಣೆಯಾಗುವಂತೆ ನೋಡಿಕೊಳ್ಳಬೇಕು. ಬಿಬಿಎಂಪಿ ಪೋರ್ಟಲ್‌ನಲ್ಲಿ ಪಾರದರ್ಶಕತೆ ತರಬೇಕು. ಆಗ ರೋಗಿಗಳಿಗೆ ಸಮಸ್ಯೆಯಾಗದಂತೆ ಹಾಸಿಗೆಗಳು ದೊರೆಯಲಿವೆ. ವೈದ್ಯಕೀಯ ಆಮ್ಲಜನಕ ಹಂಚಿಕೆಗೆ ಸಂಬಂಧಿಸಿದಂತೆ ವಲಯವಾರು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಆಗ ಅಲೆದಾಟ ನಡೆಸುವುದು ತಪ್ಪಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.