ADVERTISEMENT

ಸಂಕಷ್ಟದಲ್ಲಿ ಮಹಿಳಾ ಉದ್ಯಮಿಗಳು

ಸಾಲ ಮರುಪಾವತಿ ಕಷ್ಟ: ಅಳಲು

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:42 IST
Last Updated 27 ಮೇ 2021, 21:42 IST
ರೂಪಾ ರಾಣಿ
ರೂಪಾ ರಾಣಿ   

ಬೆಂಗಳೂರು: ಲಾಕ್‌ಡೌನ್‌ನಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಆದರೆ, ಸರ್ಕಾರವು ಬೃಹತ್‌ ಕೈಗಾರಿಕಾ, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳತ್ತ ಮಾತ್ರ ಗಮನ ಹರಿಸುತ್ತಿದೆ. ಜತೆಗೆ, ಮಹಿಳಾ ಉದ್ಯಮಿಗಳ ನೆರವಿಗೂ ಸರ್ಕಾರ ಧಾವಿಸಬೇಕು ಎಂದು ಮಹಿಳಾ ಉದ್ಯಮಿಗಳ ಸಂಘ ಒತ್ತಾಯಿಸಿದೆ.

’ರಾಜ್ಯದಲ್ಲಿ ಮಹಿಳೆಯರೇ ನಡೆಸುತ್ತಿರುವ ಉದ್ಯಮಗಳ ಸಂಖ್ಯೆ 9.36 ಲಕ್ಷದಷ್ಟಿವೆ. ಆದರೆ, ಸರ್ಕಾರ ನಮ್ಮ ಕಡೆಗೆ ಗಮನ ಹರಿಸುತ್ತಿಲ್ಲ‘ ಎಂದು ಎಂದು ಭಾರತೀಯ ಮಹಿಳಾ ಉದ್ಯಮಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ರೂಪಾ ರಾಣಿ ಹೇಳಿದರು.

’ಕಳೆದ ವರ್ಷ ಉದ್ಯಮಗಳು ಪಡೆದ ಒಟ್ಟು ಸಾಲದ ಮೊತ್ತದಲ್ಲಿ ಶೇ 10ರಷ್ಟು ಕೋವಿಡ್‌ ಸಾಲದಂತೆ ನೀಡಲಾಗಿತ್ತು. ಅಂದರೆ, ಬ್ಯಾಂಕುಗಳಿಂದ ₹35 ಲಕ್ಷ ಸಾಲ ಪಡೆದಿದ್ದರೆ, ಕೋವಿಡ್ ಸಾಲವಾಗಿ ₹3.5 ಲಕ್ಷ ನೀಡಲಾಗುತ್ತಿತ್ತು. ಈ ಬಾರಿ ಆ ಸೌಲಭ್ಯವನ್ನೂ ಒದಗಿಸಿಲ್ಲ‘ ಎಂದು ಅವರು ಹೇಳಿದರು.

ADVERTISEMENT

’ಉದ್ಯಮಗಳು ಪಡೆಯುವ ವರಮಾನದ ಪ್ರಮಾಣ ಆಧರಿಸಿ ಬ್ಯಾಂಕುಗಳು ಸಾಲ ನೀಡುತ್ತವೆ. 10ರಿಂದ 12 ಜನರನ್ನು ಇಟ್ಟುಕೊಂಡು ಉದ್ಯಮ ನಡೆಸುವ ನಾವು, ಕಂಪನಿಯ ಖಾತೆಯ ಮೂಲಕ ಮಕ್ಕಳ ಶಿಕ್ಷಣಕ್ಕೂ ಸಾಲ ತೆಗೆದುಕೊಳ್ಳುತ್ತಿದ್ದೆವು. ಜಂಟಿ ಖಾತೆಯ ರೂಪದಲ್ಲಿ ಈ ಸೌಲಭ್ಯ ಪಡೆದುಕೊಂಡಿದ್ದೆವು. ಲಾಕ್‌ಡೌನ್‌ನಿಂದ ಯಾವುದೇ ವಹಿವಾಟು ನಡೆಯುತ್ತಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿದೆ. ಈಗ ಶೈಕ್ಷಣಿಕ ಸಾಲವನ್ನೂ ಬ್ಯಾಂಕುಗಳು ಒದಗಿಸುತ್ತಿಲ್ಲ‘ ಎಂದು ಅವರು ಅಳಲು ತೋಡಿಕೊಂಡರು.

‘ಸರ್ಕಾರವು ಮಹಿಳಾ ಉದ್ಯಮಿಗಳಿಗೆ ಬಡ್ಡಿರಹಿತ ಸಾಲ ನೀಡಬೇಕು. ಮಹಿಳೆಯರು ನಡೆಸುವ ಉದ್ಯಮಗಳು ಅಸಂಘಟಿತ ವಲಯದಲ್ಲಿವೆ. ಇಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರವೇ ವೇತನವನ್ನು (ಲಾಕ್‌ಡೌನ್‌ ಅವಧಿ) ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.