ADVERTISEMENT

ಕೋವಿಡ್‌ ಗೆದ್ದವರು: ‘ಮನಸ್ಸಿಗೇ ಹಚ್ಚಿಕೊಳ್ಳಲಿಲ್ಲ’

​ಪ್ರಜಾವಾಣಿ ವಾರ್ತೆ
Published 17 ಮೇ 2021, 18:43 IST
Last Updated 17 ಮೇ 2021, 18:43 IST

ನಮ್ಮ ಮನೆಯ ನೆಲ ಮಹಡಿಯಲ್ಲಿದ್ದ ವೃದ್ಧ ದಂಪತಿಗೆ ಐದಾರು ದಿನಗಳು ತೀವ್ರ ಜ್ವರ ಬಂದು ಕೊಲಂಬಿಯಾ ಏಷ್ಯಾ ಸೇರಿದಾಗಲೇ ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ಆಗಿನ್ನೂ ಎರಡನೇ ಅಲೆ ಆರಂಭವಾಗಿರಲಿಲ್ಲ. ವೃದ್ಧ ದಂಪತಿಯ ಮಗಳು ‘ನೀವು ಎಲ್ಲ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಮಧ್ಯರಾತ್ರಿ ತಿಳಿಸಿದರು.

ಮಾರನೇ ದಿನವೇ ರಾಜಮಹಲ್ ಗುಟ್ಟಹಳ್ಳಿಯ ಬಿಬಿಎಂಪಿ ಆಸ್ಪತ್ರೆಗೆ ಹೋಗಿ ‘ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿದೆವು. ನಿಮ್ಮಲ್ಲಿ ಯಾರಿಗಾದರೂ ಜ್ವರ ಬಂದಿತ್ತೇ ಎಂದು ಕೇಳಿದರು. ಅಪ್ಪ– ಅಮ್ಮನಿಗೆ ಜ್ವರ ಬಂದಿರಲಿಲ್ಲ. ‘ನನಗೆ ಬಂದಿತ್ತು’ ಎಂದೆ. ಮೂವರಿಗೂ ಆಂಟಿಜನ್‌ ಪರೀಕ್ಷೆ ಮಾಡಿದರು. ನನಗೆ ಮಾತ್ರ ಪಾಸಿಟಿವ್‌ ಬಂದಿತ್ತು . ಆರ್‌ಟಿಪಿಸಿಆರ್‌ಗಾಗಿ ಗಂಟಲ ದ್ರವ ಪಡೆದು ಲ್ಯಾಬ್‌ಗೆ ಕಳಿಸಿದರು. ಎರಡು ದಿನಗಳ ಬಳಿಕ ಪಾಸಿಟಿವ್‌ ಎಂಬುದು ಮತ್ತೊಮ್ಮೆ ಖಚಿತವಾಯಿತು.

ಅಲ್ಲಿಂದ ಹೊರಡುವ ಮುನ್ನ ಕೈಗೊಂದು ಮಾತ್ರೆಗಳ ಕಿಟ್‌ ಕೊಟ್ಟು, ಏನೆಲ್ಲ ಮಾಡಬೇಕು ಎಂದು ಬಿಬಿಎಂಪಿ ವೈದ್ಯರು ಹೇಳಿದರು. ಆಸ್ಪತ್ರೆಗೆ ಸೇರುತ್ತೀರಾ ಎಂದರು. ಬೇಡ ಎಂದೆವು. ಗಾಬರಿ ಆಗಬೇಡಿ, ಏನೇ ಇದ್ದರೂ ಕಾಲ್‌ ಮಾಡಿ ಎಂದು ವೈದ್ಯ ಡಾ.ರಾಹಿಲ್ ಎಂಬುವರು ತಮ್ಮ ಸಂಖ್ಯೆ ನೀಡಿದರು. ನರ್ಸ್‌ಗಳು ಕೂಡ ‘ಗಾಬರಿ ಆಗಬೇಕಿಲ್ಲ, ಧೈರ್ಯದಿಂದ ಇರಿ’ ಎಂದು ಹೇಳಿ ಕಳಿಸಿದರು. ಎರಡೇ ದಿನಗಳಲ್ಲಿ ಕೆಳ ಮನೆಯ ವೃದ್ಧ ದಂಪತಿಯಲ್ಲಿ ತಾತ ಆಸ್ಪತ್ರೆಯಲ್ಲೇ ತೀರಿಕೊಂಡ ವಿಚಾರ ಗೊತ್ತಾಯಿತು. ಅವರ ಪತ್ನಿ ಮನೆಯಲ್ಲಿ ಐಸೊಲೇಷನ್‌ ಆಗಿದ್ದರು. ಮನೆಯಲ್ಲಿ ನನ್ನ ಅಪ್ಪ, ಅಮ್ಮನಿಗೆ ಆತಂಕ. ಆದರೆ, ನನಗೆ ಕೊರೊನಾ ಪಾಸಿಟಿವ್‌ ಆಗಿದೆ ಎಂಬುದೇ ಮನಸ್ಸಿಗೆ ಹೋಗಲಿಲ್ಲ. ಪ್ರತಿ ನಿತ್ಯ ಬೆಳಗ್ಗಿನಿಂದ ಸಂಜೆವರೆಗೆ ಆನ್‌ಲೈನ್‌ ಕ್ಲಾಸ್‌ನಲ್ಲಿ ಕೂರುತ್ತಿದ್ದೆ, ಸಂಜೆ ಮೇಲೆ ವಿದೇಶಿ ಭಾಷೆಯ ಕಲಿಕೆಯ ತರಗತಿಗೆ ಹಾಜರಾಗುತ್ತಿದ್ದೆ.

ADVERTISEMENT

ಮೊದಲ ಎರಡು ದಿನ ಬಿಬಿಎಂಪಿ ಕಡೆಯಿಂದ ಕರೆ ಬಂದು ಆರೋಗ್ಯ ವಿಚಾರಿಸುತ್ತಿದ್ದರು. ಹೊತ್ತು ಹೊತ್ತಿಗೆ ವೈದ್ಯರು ಹೇಳಿದಂತೆ ಗುಳಿಗೆ ನುಂಗುತ್ತಿದ್ದೆ. ಹಬೆ ತೆಗೆದುಕೊಳ್ಳುವುದು, ಬಿಸಿ ಉಪ್ಪು ನೀರನ್ನು ಗಂಟಲಿಗೆ ಬಿಟ್ಟುಕೊಂಡು ಗಾರ್ಗಲ್ ಮಾಡಿಕೊಳ್ಳುತ್ತಿದ್ದೆ. ಬಿಸಿ ಬಿಸಿ ನೀರು ಕುಡಿಯುತ್ತಿದ್ದೆ. ಇದಾದ ಎರಡು ದಿನಗಳಲ್ಲಿ ಬಾಯಿ ರುಚಿ ಮತ್ತು ಆಘ್ರಾಣ ಶಕ್ತಿ ಹೋಯಿತು. ಉಸಿರು ಕಟ್ಟಿದಂತೆ ಆಗುತ್ತಿತ್ತು. ಆ ವೇಳೆಗೆ ಪಲ್ಸ್‌ ಆಕ್ಸಿ ಮೀಟರ್‌ ತರಿಸಿಕೊಂಡಿದ್ದರಿಂದ ಅದರ ಮೂಲಕ ಆಮ್ಲಜನಕದ ಪ್ರಮಾಣ ನೋಡಿಕೊಳ್ಳುತ್ತಿದ್ದೆ. ದೀರ್ಘ ಉಸಿರಾಟ ಮಾಡುತ್ತಿದ್ದೆ. ತಾಜಾ ಹಣ್ಣುಗಳನ್ನು ಸೇವಿಸುವಂತೆ ಮತ್ತು ಹೆಚ್ಚು ನೀರು ಕುಡಿಯುವಂತೆ ಹೇಳಿದ್ದರು. ಭೇದಿಯೂ ಆಗುತ್ತಿತ್ತು. ಆಗ ವೈದ್ಯರಿಗೆ ವಾಟ್ಸ್‌ ಆ್ಯಪ್‌ನಲ್ಲಿ ಸಂದೇಶ ಕಳಿಸಿದಾಗ, ಅದಕ್ಕೆ ಏನು ಮಾಡಬೇಕು ಎಂದು ಹೇಳುತ್ತಿದ್ದರು. ಈ ಮಧ್ಯೆ ಕೆಮ್ಮು ಕೂಡ ಹೆಚ್ಚಾಗಿತ್ತು. ಆರ್ಯುರ್ವೇದಿಕ್ ಸಿರಪ್‌ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು.

ಇಷ್ಟೆಲ್ಲ ಆದರೂ ನನಗೆ ಕೋವಿಡ್‌ ಆಗಿದೆ ಎಂಬುದು ಮನಸ್ಸಿಗೆ ಬರಲಿಲ್ಲ. ಐಸೋಲೇಷನ್‌ ಅವಧಿ ಮುಗಿಯುವುದರೊಳಗೇ ಗುಣಮುಖಳಾಗಿದ್ದೆ. ತರಗತಿಗಳಲ್ಲದೇ, ಮನಸ್ಸಿಗೆ ಉಲ್ಲಾಸ ನೀಡುವ ಸಂಗೀತ ಮತ್ತು ಹಾಸ್ಯದ ಕಾರ್ಯಕ್ರಮಗಳನ್ನು ಮೊಬೈಲ್‌ನಲ್ಲಿ ನೋಡುತ್ತಿದ್ದೆ. ಟಿ.ವಿಗಳಲ್ಲಿ ಬರುತ್ತಿದ್ದ ಕೋವಿಡ್‌ ಸುದ್ದಿಗಳನ್ನು ನೋಡುವ ಗೋಜಿಗೆ ಹೋಗಲಿಲ್ಲ. ಆದರೆ, ಕೊರೊನಾ ವೈರಸ್‌ ಕುರಿತ ಅಧ್ಯಯನ ವರದಿಗಳನ್ನು ಓದಿಕೊಳ್ಳುತ್ತಿದ್ದೆ. ಜೀವವಿಜ್ಞಾನದ ವಿದ್ಯಾರ್ಥಿಯಾಗಿದ್ದರಿಂದ ಆ ಬಗ್ಗೆ ಕುತೂಹಲವೂ ಇತ್ತು. ಸಕಾಲದಲ್ಲಿ ಚಿಕಿತ್ಸೆ ಪಡೆದು, ಶಿಸ್ತು ಬದ್ಧ ಜೀವನ ಶೈಲಿ ಇರಬೇಕು. ಯಾವುದೇಕಾರಣಕ್ಕೂ ಭೀತಿಗೊಳಗಾಗಬಾರದು.

- ಅನಘಾ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.