ADVERTISEMENT

ಕೊರೊನಾ ಗೆದ್ದವರು: ಭಯ ಬಿಟ್ಟರೆ ಕೊರೊನಾ ನಮ್ಮ ಅಡಿಯಾಳು – ಗಿರಿಜಮ್ಮ

​ಪ್ರಜಾವಾಣಿ ವಾರ್ತೆ
Published 17 ಮೇ 2021, 18:39 IST
Last Updated 17 ಮೇ 2021, 18:39 IST
ಗಿರಿಜಮ್ಮ
ಗಿರಿಜಮ್ಮ   

ಬೆಂಗಳೂರು: ‘ಕೊರೊನಾ ಸೋಂಕು ನನ್ನನ್ನೂ ಬಂಧಿಸಿತ್ತು. ಮನೆಯವರನ್ನು ಮತ್ತೆ ನೋಡುವ ನಂಬಿಕೆಯೇ ಕುಸಿದಿತ್ತು.ಒಂದು ತಿಂಗಳ ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಜಯ ನನ್ನದಾಯಿತು’.

ಇದು ಕೊರೊನಾ ಸೋಂಕಿಗೆ ಒಳಗಾಗಿದ್ದ ನಗರದ 86 ವರ್ಷದ ಗಿರಿಜಮ್ಮ ಅವರ ಗೆಲುವಿನ ಮಾತುಗಳು.

‘ಮನೆಗೆ ಮರಳಿದ ಬಳಿಕ ಸದಸ್ಯರಕಣ್ಣ ಬೆಳಕಲ್ಲಿ ನನ್ನ ಬಿಂಬ ಕಾಣಿಸಿತು. ಕುಟುಂಬಸ್ಥರ ಶಕ್ತಿಯೇ ನನಗೆ ಆತ್ಮಸ್ಥೈರ್ಯ ನೀಡಿತು. ಇದಕ್ಕೆ ಮನೆಯವರೆಲ್ಲ ನಿಬ್ಬೆರಗಾದರು. ಮನೆಯವರೂ ಸೋಂಕಿಗೆ ಒಳಗಾಗಿದ್ದ ವಿಚಾರ ತಿಳಿದು, ನಾನೂ ಬೆರಗಾದೆ.’

ADVERTISEMENT

‘ಆಸ್ಪತ್ರೆಯೊಳಗೆ ಗುರುತೇ ಸಿಗದ, ಎಲ್ಲರೂ ಒಂದೇ ರೀತಿಯ ಪ್ಲಾಸ್ಟಿಕ್ ದಿರಿಸಿನಲ್ಲಿದ್ದರು. ಸದಾ ಉರಿಯುತ್ತಿದ್ದ ದೀಪಗಳಿಂದ ಹಗಲು, ರಾತ್ರಿಯ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ. ಮುಖಕ್ಕೆ ಹಾಕಿದ್ದ ಆಮ್ಲಜನಕದ ಮಾಸ್ಕ್‌ನಿಂದಾಗಿ ಮಾತನಾಡುವ ಅವಕಾಶವೂ ಇರಲಿಲ್ಲ’.

‘ಮುರಿತಗೊಂಡಿದ್ದಬಲಗೈ ನೋವು, ಆ ಔಷಧಗಳು, ಪರೀಕ್ಷೆಗಳು, ಮೈ ಚುಚ್ಚಿದ್ದೇ ಚುಚ್ಚಿದ್ದು. ಈ ವೇಳೆ ಉಸಿರುಗಟ್ಟುವ ಅನುಭವವೇ ಹೆಚ್ಚು. ಕಣ್ಣು ಹಾಯಿಸಿದಷ್ಟೂ ಎರಡೂ ಬದಿ ರೋಗಿಗಳು ಮಲಗಿದ್ದ ಹಾಸಿಗೆಗಳು. ‌ಕುತೂಹಲದಿಂದ ನೋಡಿದರೆ, ಎಲ್ಲ ವಯೋಮಾನದವರೂ ಇದ್ದರು’.

‘ನೋಡ ನೋಡುತ್ತಿದ್ದಂತೆ ಮುಖದ ಮೇಲೆ ಬಟ್ಟೆ ಹಾಕಿ, ಸ್ಟ್ರೆಚರ್‌ಗಳಲ್ಲಿ ಎಳೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಂತ, ಅಗಾಧ ಮೌನ, ಅನಾಥ ಪ್ರಜ್ಞೆ,ಸಹಿಸಲಾಗದ ಸಂಕಟ ಎಲ್ಲವೂ ನನ್ನನ್ನು ಆವರಿಸಿಕೊಂಡಿತು. ಮೈ ಹಗುರಾಗುವ ಸ್ನಾನವಿರಲಿಲ್ಲ. ತಿನ್ನುವ ಉತ್ಸಾಹವಿಲ್ಲ, ನನ್ನವರ ಸುಳಿವೂ ಸಿಗಲಿಲ್ಲ. ಆಸ್ಪತ್ರೆಯಲ್ಲಿ ಇದಾಗಿತ್ತು ನನ್ನ ಸ್ಥಿತಿ.’

‘ಸಂಬಂಧಕ್ಕೆ ಜೊತೆಯಾಗಿದ್ದ ಮನೆಯ ಸದಸ್ಯರು ಸೋಂಕಿನಲ್ಲೂ ಜೊತೆಯಾಗಿದ್ದಾರೆ. ಅದರ ಸುಸ್ತು, ಸಂಕಟ, ಐಸಿಯುನಲ್ಲಿ ಕಳೆದ ಅನುಭವದ ರೋದನೆ ಮನೆಯವರನ್ನು ಕಾಡದಿರಲಿ’.

‘ಆಸ್ಪತ್ರೆಯಲ್ಲಿದ್ದಾಗ ಮನೆಯವರೂ ನನಗಾಗಿ ಪರದಾಡಿದ್ದಾರೆ. ಕೊರೊನಾದಿಂದ ಆಪ್ತರ, ಪರಿಚಿತರ ಸಾವು–ನೋವುಗಳು ನಮ್ಮನ್ನು ಹೆದರಿಕೆಯತ್ತ ತಳ್ಳುತ್ತಿವೆ. ಆದರೆ, ಅದನ್ನು ಗೆದ್ದಾಗ ಮಾತ್ರ ಕೊರೊನಾ ನಮ್ಮ ಅಡಿಯಾಳು ಎಂಬ ಮಾತನ್ನು ಪ್ರತಿಯೊಬ್ಬರೂ ಪಾಲಿಸಬೇಕು’.

‘ಸಾವಿನ ಸುದ್ದಿ ಕೇಳಿ ಮನಸ್ಸು ಹಿಂಡುವುದು ಸಾಮಾನ್ಯ. ಇವುಗಳ ನಡುವೆ ಕೊರೊನಾ ಮಣಿಸಿ, ಮನೆಗೆ ಬಂದಿರುವುದು ಯುದ್ಧ ಗೆದ್ದು ಬಂದ ಅನುಭವ ನೀಡುತ್ತಿದೆ. ಕಾಳಜಿ ತೋರುತ್ತಿದ್ದ ವೈದ್ಯರ ಕಾಳಜಿ, ಧೈರ್ಯ ನೀಡುತ್ತಿದ್ದ ಆತ್ಮೀಯರಿಗೂ ಇದರ ಪಾಲು ಸಿಗಲೇಬೇಕು. ತಾಯಿಗೆ ಮಕ್ಕಳು ಮತ್ತೆ ಸಿಕ್ಕಿರುವ ಆನಂದದಲ್ಲೇ ದಿನ ಕಳೆಯುತ್ತಿರುವೆ’.

‘ಎಲ್ಲೆಲ್ಲೂ ಸಾವು ನೋವಿನ ಸುದ್ದಿಗಳೇ ಕೇಳಿ ಬರುತ್ತಿರುವ ದಿನಗಳಲ್ಲಿ ‘ಪ್ರಜಾವಾಣಿ’ ಆರಂಭಿಸಿರುವ ಕೋವಿಡ್-ಗೆದ್ದವರ ಕಥೆ ಸಮಾಜಕ್ಕೆ ಮಾದರಿಯಾಗಿದೆ. ಕೋವಿಡ್ ಕಾಲದ ಅನುಭವಗಳಿಗೆ ವೇದಿಕೆ ಕಲ್ಪಿಸಿದೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.