ADVERTISEMENT

ಕೋವಿಡ್‌: ಒಟ್ಟಾಗಿ ಹೋರಾಡೋಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 19:30 IST
Last Updated 17 ಮಾರ್ಚ್ 2020, 19:30 IST
ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್‌ ಆಸ್ಪತ್ರೆ - ಪ್ರಜಾವಾಣಿ ಚಿತ್ರಗಳು/ ಇರ್ಷಾದ್‌ ಮೊಹಮ್ಮದ್
ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್‌ ಆಸ್ಪತ್ರೆ - ಪ್ರಜಾವಾಣಿ ಚಿತ್ರಗಳು/ ಇರ್ಷಾದ್‌ ಮೊಹಮ್ಮದ್   

ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್‌ ಆಸ್ಪತ್ರೆಯ ಆವರಣಕ್ಕೆ ಕಾಲಿಟ್ಟಾಗ ಮೊದಲು ಎದುರಾದದ್ದೇ ಮಾಸ್ಕ್‌ ಧರಿಸಿದ ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳು. ಇವರಷ್ಟೇ ಅಲ್ಲದೇ ರೋಗಿಗಳ ಕುಟುಂಬದ ಸದಸ್ಯರೂ ಸುರಕ್ಷತಾ ಕ್ರಮವಾಗಿ ಮಾಸ್ಕ್‌ ಧರಿಸಿದ್ದರು.

ಹೆರಿಗೆ, ನವಜಾತ ಶಿಶುಗಳ ಆರೈಕೆ ಮತ್ತು ಮಕ್ಕಳ ಚಿಕಿತ್ಸಾ ವಾರ್ಡ್‌ ಸೇರಿದಂತೆಆಸ್ಪತ್ರೆಯ ವಿವಿಧ ವಾರ್ಡ್‌ಗಳಲ್ಲಿ ಸುತ್ತು ಹಾಕಿದಾಗ ಯಾರ ಮುಖದಲ್ಲೂ ಕೊರೊನಾ ಸೋಂಕಿನ ಭೀತಿ, ಆತಂಕ ಕಾಣಲಿಲ್ಲ.

ಕೊರೊನಾ ಸೋಂಕಿತರು ಮತ್ತು ಶಂಕಿತ ರೋಗಿಗಳ ಆರೈಕೆಗಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ (ಐಸೊಲೇಷನ್‌) ವಾರ್ಡ್‌ ಮತ್ತು ಕ್ವಾರೆಂಟೈನ್‌ ಸೆಂಟರ್‌ತೆರೆಯಲಾಗಿದೆ.ಈ ವಾರ್ಡ್‌ಗಳ ಅನತಿ ದೂರದಲ್ಲಿಯೇ ವೈದ್ಯಕೀಯ ಸಿಬ್ಬಂದಿ ಸಾರ್ವಜನಿಕರನ್ನು ತಡೆದು ನಿಲ್ಲಿಸುತ್ತಿದ್ದರು.

ADVERTISEMENT

ಆ ವಾರ್ಡ್ ನೋಡಲು ಹೋದ ‘ಮೆಟ್ರೊ’ ತಂಡವನ್ನು ತಡೆದು ‘ಇಲ್ಲಿಂದಸಾರ್ವಜನಿಕರಿಗೆ ಪ್ರವೇಶವಿಲ್ಲ. ವೈದ್ಯಕೀಯ ಅಧೀಕ್ಷಕರು ಅಥವಾ ಸಂಬಂಧಿಸಿದ ವೈದ್ಯಾಧಿಕಾರಿಗಳ ಒಪ್ಪಿಗೆ ಪಡೆದರೆ ಮಾತ್ರ ಒಳಗೆ ಬಿಡುತ್ತೇವೆ’ ಎಂದರು.

‘ಸಾರ್ವಜನಿಕರಿಗಷ್ಟೇ ಅಲ್ಲ, ಆಯ್ದ ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ, ಉಳಿದ ಯಾವ ಆಸ್ಪತ್ರೆ ಸಿಬ್ಬಂದಿಗೂ ಇಲ್ಲಿಗೆ ಪ್ರವೇಶವಿಲ್ಲ’ ಎಂದು ಅಲ್ಲಿದ್ದ ಸಿಬ್ಬಂದಿ ವಿವರಿಸಿದರು. ಇದೇ ವೇಳೆ ಕೆ.ಸಿ. ಜನರಲ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ ರಾಮಯ್ಯ ಅವರು ‘ಕೋವಿಡ್‌–19’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಮುಂಜಾಗ್ರತಾ ಕ್ರಮ, ವೈದ್ಯಕೀಯ ಸೇವೆ ಕುರಿತು ಸಿಬ್ಬಂದಿ ಜತೆ ತುರ್ತುಸಭೆ ನಡೆಸುತ್ತಿದ್ದರು. ಇನ್ನೊಂದೆಡೆ ಆಸ್ಪತ್ರೆಯಲ್ಲಿರುವ ಒಳ ರೋಗಿಗಳನ್ನು ಭೇಟಿಯಾಗಲು ತೆರಳುವವರಿಗೆ ಮಾಸ್ಕ್‌ ಧರಿಸುವಂತೆ ಸಿಬ್ಬಂದಿ ಸೂಚಿಸುತ್ತಿದ್ದರು. ವಾರ್ಡ್‌ಗಳಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಇಟ್ಟಿದ್ದರು. ನರ್ಸ್‌ ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ರೋಗಿಗಳ ಸಂಬಂಧಿಕರು ಕೂಡ ಆಗಾಗ ಆ ಸ್ಯಾನಿಟೈಸರ್‌ನಿಂದ ಕೈ ಶುಚಿ ಮಾಡಿಕೊಳ್ಳುತ್ತಿದ್ದದು ಕಂಡುಬಂತು.

ಹೆರಿಗೆ ವಾರ್ಡ್‌ ಹೊರಗೆ ಕುಳಿತಿದ್ದ ಬಾಣಂತಿ ಯರ ಸಂಬಂಧಿಕರನ್ನು ಮಾತನಾಡಿಸಿದಾಗ ‘ಕೊರೊನಾ ಸೋಂಕು ಹರಡುವ ಭೀತಿ ಇರುವು ದರಿಂದ ವಾರ್ಡ್‌ ಒಳಗಡೆ ಎಲ್ಲರನ್ನೂ ಬಿಡುತ್ತಿಲ್ಲ. ಒಳ ಹೋಗುವಾಗ ಕೈಗಳಿಗೆ ಸ್ಯಾನಿಟೈಸರ್‌ ಹಚ್ಚುತ್ತಾರೆ. ಮುಖಕ್ಕೆ ಮಾಸ್ಕ್‌ ಧರಿಸುವಂತೆ ಹೇಳುತ್ತಾರೆ’ ಎಂದರು.

ಮಕ್ಕಳ ವಾರ್ಡ್‌ಗೆ ತೆರಳುವ ಜನರಿಗೂ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸುವಂತೆ ಸೂಚಿಸ ಲಾಗುತ್ತಿತ್ತು. ಆಸ್ಪತ್ರೆ ಆವರಣ ಸ್ವಚ್ಛವಾಗಿಡುವಂತೆ ಧ್ವನಿವರ್ಧಕದಲ್ಲಿ ಆಗಾಗ ಪ್ರಕಟಿಸುತ್ತಿದ್ದರು. ಎಲ್ಲ ವಾರ್ಡ್‌ಗಳು ಮತ್ತು ಆವರಣದ ಕಸವನ್ನು ಆಗಾಗ ಸ್ವಚ್ಛಗೊಳಿಸುವ ಕೆಲಸವೂ ನಡೆಯುತ್ತಿತ್ತು.

ಕೋವಿಡ್‌–19 ವೈರಸ್‌ ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಪೋಸ್ಟರ್‌ಗಳನ್ನು ಆಸ್ಪತ್ರೆಯ ಆವರಣ ಮತ್ತು ವಾರ್ಡ್‌ಗಳ ಬಳಿ ಅಂಟಿಸಲಾಗಿತ್ತು.

ಕೋವಿಡ್‌–19 ಶಂಕಿತರು ತಪಾಸಣೆ ಅಥವಾ ಚಿಕಿತ್ಸೆಗೆ ಬಂದಾಗ ಸೌಜನ್ಯದಿಂದ ವರ್ತಿಸುವಂತೆಯೂ ಸೂಚಿಸಲಾಗಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವರೆಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ರಜೆ ರದ್ದು ಮಾಡಲಾಗಿದ್ದು,ಎಲ್ಲ ಸಾರ್ವತ್ರಿಕ ರಜೆಗಳಲ್ಲೂ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಇಂತಹ ಅನೇಕ ನೋಟಿಸ್‌ಗಳು ಸೂಚನಾಫಲಕಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.