ADVERTISEMENT

ಟ್ರಯಾಜಿಂಗ್‌ ಕಟ್ಟುನಿಟ್ಟು: ಬಿಬಿಎಂಪಿ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 19:28 IST
Last Updated 17 ಜನವರಿ 2022, 19:28 IST
ನಗರದಲ್ಲಿ ಸೋಮವಾರ ನಡೆದ ಬನಶಂಕರಿ ದೇವಿ ರಥೋತ್ಸವ ವೀಕ್ಷಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೆಚ್ಚಿನವರು ಮಾಸ್ಕ್‌ ಧರಿಸಿದ್ದರಾದರೂ ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತರು –ಪ್ರಜಾವಾಣಿ ಚಿತ್ರ/ಪ್ರಶಾಂತ್.ಎಚ್.ಜಿ.
ನಗರದಲ್ಲಿ ಸೋಮವಾರ ನಡೆದ ಬನಶಂಕರಿ ದೇವಿ ರಥೋತ್ಸವ ವೀಕ್ಷಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೆಚ್ಚಿನವರು ಮಾಸ್ಕ್‌ ಧರಿಸಿದ್ದರಾದರೂ ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತರು –ಪ್ರಜಾವಾಣಿ ಚಿತ್ರ/ಪ್ರಶಾಂತ್.ಎಚ್.ಜಿ.   

ಬೆಂಗಳೂರು: ಕೋವಿಡ್‌ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ ಮಾಡುವುದಕ್ಕೆ ಮುನ್ನ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಲು ಅವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ (ಟ್ರಯಾಜಿಂಗ್‌) ಒಳಪಡಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಆರೋಗ್ಯ ಸ್ಥಿತಿ ಸ್ಥಿರವಾಗಿದ್ದವರಿಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ/ ಆಸ್ಪತ್ರೆಗಳಲ್ಲಿ ಸಾಮಾನ್ಯ ಹಾಸಿಗೆ ಹಂಚಿಕೆ ಮಾಡಿರುವುದು ಕಂಡು ಬಂದಿದೆ. ಹಾಸಿಕೆ ಹಂಚಿಕೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಶಿಷ್ಟಾಚಾರದ ಉಲ್ಲಂಘನೆ ಇದು. ಹಾಗಾಗಿ ಇನ್ನು ಮುಂದೆ ಆಸ್ಪತ್ರೆಗೆ ದಾಖಲಾಗಲು ಬಯಸುವ ಪ್ರತಿಯೊಬ್ಬ ಸೋಂಕಿತರ ಟ್ರಯಾಜಿಂಗ್‌ ಸಮರ್ಪಕವಾಗಿ ನಡೆಯುವಂತೆ ವಲಯ ಮಟ್ಟದ ಎಲ್ಲ ಆರೋಗ್ಯ ತಂಡಗಳು, ಟ್ರಯಾಜ್‌ ತಂಡಗಳು, ಆಸ್ಪತ್ರೆಗಳಲ್ಲಿ ಹಾಸಿಕೆ ನಿರ್ವಹಣೆಯ ಕೇಂದ್ರೀಕೃತ ವ್ಯವಸ್ಥೆ (ಸಿಎಚ್‌ಬಿಎಂಎಸ್‌) ಸಿಬ್ಬಂದಿ, ಕೋವಿಡ್‌ ವೈದ್ಯರು, ವೈದ್ಯಕೀಯ ಅಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ನಿಯಂತ್ರಣ ಕೊಠಡಿಗಳ ಅಧಿಕಾರಿಗಳು, ವಲಯ ಮಟ್ಟದ ನಿಯಂತ್ರಣ ಕೊಠಡಿಗಳ ಅಧಿಕಾರಿಗಳು, ನೋಡಲ್‌ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ಈ ತಂಡಗಳ ಯಾವುದೇ ಸದಸ್ಯರು ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು ಕಂಡುಬಂದರೆ 2005ರ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆಯಡಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಟ್ರಯಾಜಿಂಗ್‌ ಸಮರ್ಪಕವಾಗಿ ನಡೆಯುವ ಬಗ್ಗೆ ವಲಯ ಆಯುಕ್ತರು ಹಾಗೂ ವಲಯ ಮಟ್ಟದ ಸಮನ್ವಯಧಿಕಾರಿಗಳು ಆಗಾಗ ಪರಿಶೀಲನೆ ನಡೆಸಬೇಕು. ಯಾವುದೇ ಉಲ್ಲಂಘನೆ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನೂ ಅವರಿಗೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.