ADVERTISEMENT

ರೋಗಿಗಳ ಸಂಬಂಧಿಕರ ಮೇಲೆ ‘ಭಾವನಾತ್ಮಕ ಒತ್ತಡ’

ಖಾಸಗಿ ಕೋಟಾದಡಿ ದಾಖಲಿಸಿಕೊಳ್ಳಲು ಆಸ್ಪತ್ರೆಗಳ ಒಲವು

​ಪ್ರಜಾವಾಣಿ ವಾರ್ತೆ
Published 1 ಮೇ 2021, 22:11 IST
Last Updated 1 ಮೇ 2021, 22:11 IST

ಬೆಂಗಳೂರು: ‘ನಿಮ್ಮ ಸಂಬಂಧಿಯ ಪರಿಸ್ಥಿತಿ ಗಂಭೀರವಾಗುತ್ತಿದೆ. ಸರ್ಕಾರಿ ಕೋಟಾದಡಿ ಹಾಸಿಗೆ ಖಾಲಿ ಇಲ್ಲ. ಬೇಗ ಖಾಸಗಿ ಕೋಟಾಗೆ ಪರಿವರ್ತಿಸಿಕೊಳ್ಳಿ..’

‘ಸರ್ಕಾರಿ ಕೋಟಾದಡಿ ಹಾಸಿಗೆ, ಆಕ್ಸಿಜನ್, ರೆಮ್‌ಡಿಸಿವಿರ್ ಇಂಜೆಕ್ಷನ್‌ ಸಿಗುವುದು ತಡವಾಗಬಹುದು. ನಿಮ್ಮ ಸಂಬಂಧಿಯ ಪ್ರಾಣಕ್ಕೆ ತೊಂದರೆಯಾಗಬಹುದು. ಖಾಸಗಿ ಕೋಟಾದಡಿ ಆದರೆ ಬೇಗ ಸೌಲಭ್ಯಗಳು ಸಿಗುತ್ತವೆ. ಆದರೆ, ಸ್ವಲ್ಪ ಜಾಸ್ತಿ ದುಡ್ಡು ಕಟ್ಟಬೇಕಾಗುತ್ತದೆ. ಯೋಚನೆ ಮಾಡಿ...’

ನಗರದ ಕೆಲವು ಖಾಸಗಿ ಆಸ್ಪತ್ರೆಗಳು ಈ ರೀತಿಯ ‘ಭಾವನಾತ್ಮಕ ಒತ್ತಡ’ವನ್ನು ಹೇರುತ್ತಿವೆ ಎಂದು ಆರೋಪಿಸುತ್ತಾರೆ ಸೋಂಕಿತರ ಸಂಬಂಧಿಕರು.

ADVERTISEMENT

ನಗರದಲ್ಲಿ 2.60 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಶೇ 10ರಷ್ಟು ರೋಗಿಗಳ ಸ್ಥಿತಿ ಗಂಭೀರವಾದರೂ 25 ಸಾವಿರ ಹಾಸಿಗೆಗಳು ಬೇಕಾಗುತ್ತವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಒಟ್ಟು 19 ಸಾವಿರ. ಈ ಅಂಕಿ–ಅಂಶವನ್ನೇ ರೋಗಿಗಳ ಸಂಬಂಧಿಕರ ಮುಂದಿಡುವ ಆಸ್ಪತ್ರೆಗಳು, ಸರ್ಕಾರಿ ಕೋಟಾದಿಂದ ಖಾಸಗಿ ಕೋಟಾದಡಿಗೆ ಪರಿವರ್ತಿಸಿಕೊಳ್ಳಲು ಹೇಳುತ್ತಿವೆ.

‘ಖಾಸಗಿಯಡಿ ಸೇರ್ಪಡೆಯಾದ ನಂತರ ಆಕ್ಸಿಜನ್, ಐಸಿಯು ಹಾಸಿಗೆಗಳ ಶುಲ್ಕವನ್ನೂ ಹೆಚ್ಚು ಮಾಡಲಾಗುತ್ತದೆ. ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗೇ ₹3000 ತೆಗೆದುಕೊಳ್ಳುತ್ತಾರೆ. ಜೀವಕ್ಕಿಂತ ದುಡ್ಡು ಮುಖ್ಯ ಅಲ್ಲ ಎಂಬ ಕಾರಣದಿಂದ ಸಾಲ ಮಾಡಿಯಾದರೂ ಹಣ ಕಟ್ಟುತ್ತಿದ್ದೇವೆ’ ಎಂದು ರೋಗಿಯ ಸಂಬಂಧಿಕರೊಬ್ಬರು ಹೇಳಿದರು.

‘ಸರ್ಕಾರಿ ಕೋಟಾದಡಿಯ ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ಹೋದ ನಂತರವೂ ಅವರ ಹೆಸರಿನಲ್ಲಿ ಆ ಹಾಸಿಗೆಯನ್ನು ಹಾಗೆಯೇ ಇಟ್ಟಿರಲಾಗಿರುತ್ತದೆ. ಸರ್ಕಾರದ ಪೋರ್ಟಲ್‌ನಲ್ಲಿ ಅದು ಸರ್ಕಾರಿ ಕೋಟಾದ ಹಾಸಿಗೆ ಎಂದೇ ತೋರಿಸಿರುತ್ತದೆ. ರೋಗಿಯ ಕಡೆಯವರಿಗೆ ಮಾತ್ರ ಇದು ಖಾಸಗಿ ಕೋಟಾ ಹಾಸಿಗೆ ಎಂದು ಹೇಳಿ ಹೆಚ್ಚು ದುಡ್ಡು ತೆಗೆದುಕೊಳ್ಳುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದರು.

‘ರೋಗಿಗೆ ಚಿಕಿತ್ಸೆ ನೀಡುವಾಗ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟರೂ ಯಾರೂ ದೂರು ನೀಡಿರುವುದಿಲ್ಲ. ರೋಗಿ ಮೃತಪಟ್ಟ ನಂತರ ವೈದ್ಯರು ಅಥವಾ ಆಸ್ಪತ್ರೆ ವಿರುದ್ಧ ದೂರುತ್ತಾರೆ. ಅಲ್ಲದೆ, ಈ ಬಗ್ಗೆ ಲಿಖಿತವಾಗಿ ದೂರು ನೀಡುವವರ ಸಂಖ್ಯೆಯೂ ವಿರಳವಾಗಿದೆ’ ಎಂದು ನೋಡಲ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.