
ಬೆಂಗಳೂರು: ಕೋವಿಡ್–19 ನಿವಾರಣೆ ಮತ್ತು ನಿಯಂತ್ರಣ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ಆಯೋಗದ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಅವುಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಔಷಧಿ, ಉಪಕರಣ ಮತ್ತು ಇತರ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕದ ಕೊರತೆಯಿಂದ ಸಂಭವಿಸಿದ ಸಾವುಗಳ ಕುರಿತು ಆಯೋಗವು ವಿಚಾರಣೆ ನಡೆಸುತ್ತಿದೆ.
2023ರ ಅಕ್ಟೋಬರ್ 7ರಂದು ಆಯೋಗವನ್ನು ನೇಮಿಸಲಾಗಿತ್ತು. ನವೆಂಬರ್ 22ಕ್ಕೆ ಆಯೋಗದ ಅವಧಿ ಕೊನೆಗೊಳ್ಳಬೇಕಿತ್ತು. ವಿಚಾರಣೆ ಬಾಕಿ ಇರುವುದರಿಂದ ಈ ಅವಧಿಯನ್ನು 2024ರ ಮೇ 24ರವರೆಗೆ ವಿಸ್ತರಿಸಲಾಗಿತ್ತು. ಆಯೋಗದ ಅಧ್ಯಕ್ಷರ ಕೋರಿಕೆಯಂತೆ ಆಗಸ್ಟ್ 31ರವರೆಗೂ ಅವಧಿ ವಿಸ್ತರಿಸಿ ಗೃಹ ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.