ADVERTISEMENT

ಆಯುಷ್ ವೈದ್ಯ ಪದ್ಧತಿ ಮಹತ್ವ ಸಾರಿದ ಕೋವಿಡ್

‘ಯುನಾನಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಕೋವಿಡ್ ಯೋಧರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 20:49 IST
Last Updated 23 ಫೆಬ್ರುವರಿ 2021, 20:49 IST
ಆಯುಷ್ ಇಲಾಖೆ ಆಯೋಜಿಸಿದ್ದ ‘ಯುನಾನಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಕೋವಿಡ್ ಯೋಧರನ್ನು ಗೌರವಿಸಲಾಯಿತು. (ನಿಂತವರು ಎಡದಿಂದ) ಮೀನಾಕ್ಷಿ ನೇಗಿ, ಆಯುಷ್ ಇಲಾಖೆ ಆಯುಕ್ತ ರಾಮಚಂದ್ರ, ರಾಷ್ಟ್ರೀಯ ಯುನಾನಿ ಸಂಸ್ಥೆಯ ನಿರ್ದೇಶಕ ಅಬ್ದುಲ್ ವದೂದ್ ಮತ್ತು ಬೆಂಗಳೂರು ನಗರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ರಫೀ ಹಕೀಂ ಇದ್ದಾರೆ - ಪ್ರಜಾವಾಣಿ ಚಿತ್ರ
ಆಯುಷ್ ಇಲಾಖೆ ಆಯೋಜಿಸಿದ್ದ ‘ಯುನಾನಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಕೋವಿಡ್ ಯೋಧರನ್ನು ಗೌರವಿಸಲಾಯಿತು. (ನಿಂತವರು ಎಡದಿಂದ) ಮೀನಾಕ್ಷಿ ನೇಗಿ, ಆಯುಷ್ ಇಲಾಖೆ ಆಯುಕ್ತ ರಾಮಚಂದ್ರ, ರಾಷ್ಟ್ರೀಯ ಯುನಾನಿ ಸಂಸ್ಥೆಯ ನಿರ್ದೇಶಕ ಅಬ್ದುಲ್ ವದೂದ್ ಮತ್ತು ಬೆಂಗಳೂರು ನಗರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ರಫೀ ಹಕೀಂ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೋವಿಡ್‌ ಕಾಯಿಲೆ ಕಾಣಿಸಿಕೊಂಡ ಬಳಿಕ ಜನತೆ ರೋಗನಿರೋಧಕ ಶಕ್ತಿ ವೃದ್ಧಿಗೆ ಆಯುಷ್ ಉತ್ಪನ್ನಗಳ ಮೊರೆಹೋದರು. ಇದರಿಂದಾಗಿ ಆಯುಷ್ ವೈದ್ಯಕೀಯ ಪದ್ಧತಿಯು ಮುನ್ನೆಲೆಗೆ ಬಂದಿತು’ ಎಂದು ಅರಣ್ಯ ನಿರ್ಮಾಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (ಸಿಎಎಂಪಿಎ) ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ತಿಳಿಸಿದರು.

ಆಯುಷ್ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ ‘ಯುನಾನಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಕೋವಿಡ್ ಯೋಧರನ್ನು ಗೌರವಿಸಿ, ಮಾತನಾಡಿದರು.

‘ಕೋವಿಡ್ ಹಲವು ಪಾಠಗಳನ್ನು ಕಲಿಸಿದೆ. ಆಯುಷ್ ವೈದ್ಯ ಪದ್ಧತಿಯಡಿ ಕಾರ್ಯನಿರ್ವಹಿಸುತ್ತಿರುವವರು ಕೋವಿಡ್‌ ನಿಯಂತ್ರಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಕೆಲ ವೈದ್ಯರು ಒಂದು ದಿನವೂ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ಕಾಯಿಲೆ ಬಗ್ಗೆ ಭಯದ ಜತೆಗೆ ರೋಗನಿರೋಧಕ ಶಕ್ತಿಯ ಪ್ರಾಮುಖ್ಯತೆ ಬಗ್ಗೆ ಕೂಡ ಜನರಿಗೆ ಜಾಗೃತಿ ಮೂಡಿತು. ಇದರಿಂದಾಗಿ ಆಯುಷ್ ಉತ್ಪನ್ನಗಳಾದ ಕಷಾಯ, ಚೂರ್ಣಗಳನ್ನು ಸೇವಿಸಿ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡರು. ಯುನಾನಿಯಂತಹ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಲ್ಲಿ ಇನ್ನಷ್ಟು ವೈಜ್ಞಾನಿಕ ಸಂಶೋಧನೆ ನಡೆಸಿ, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು’ ಎಂದರು.

ADVERTISEMENT

ಆಯುಷ್ ಇಲಾಖೆಯ ಆಯುಕ್ತ ರಾಮಚಂದ್ರ ಮಾತನಾಡಿ, ‘ಸಾವಿರಾರು ವರ್ಷಗಳ ಇತಿಹಾಸ ಇರುವ ಯುನಾನಿ ಪದ್ಧತಿಯನ್ನು ಮುನ್ನೆಲೆಗೆ ತರಲು ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು’ ಎಂದರು.

ರಾಷ್ಟ್ರೀಯ ಯುನಾನಿ ಸಂಸ್ಥೆ ನಿರ್ದೇಶಕ ಪ್ರೊ. ಅಬ್ದುಲ್ ವದೂದ್, ‘ಯುನಾನಿ ವೈದ್ಯ ಪದ್ಧತಿಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಹಕೀಂ ಅಜ್ಮಲ್‌ ಖಾನ್‌ ಅವರು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಪ್ರಚುರಪಡಿಸಲು ಶ್ರಮಿಸಿದ್ದರು. ಪರಿಣಾಮಕಾರಿಯಾದ ಈ ಔಷಧಿಗಳ ಬಗ್ಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಬೇಕು’ ಎಂದರು.

ಕೋವಿಡ್‌ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದ 250ಕ್ಕೂ ಅಧಿಕ ಆಯುಷ್ ವೈದ್ಯರು ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.