ADVERTISEMENT

‘ನಮ್ಮ ಮೆಟ್ರೊ’ ವರಮಾನ ಹೆಚ್ಚಳ

ಕೋವಿಡ್‌ ಸಾಂಕ್ರಾಮಿಕ ಕ್ಷೀಣಿಸಿದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ

ಜಿ.ಶಿವಕುಮಾರ
Published 24 ಮೇ 2022, 19:48 IST
Last Updated 24 ಮೇ 2022, 19:48 IST
ಹಸಿರು ಮಾರ್ಗದಲ್ಲಿ ಸಂಚರಿಸುವ ಮೆಟ್ರೊ ರೈಲು
ಹಸಿರು ಮಾರ್ಗದಲ್ಲಿ ಸಂಚರಿಸುವ ಮೆಟ್ರೊ ರೈಲು   

ಬೆಂಗಳೂರು: ಕೋವಿಡ್‌ನಿಂದಾಗಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದ್ದರಿಂದ ಆರ್ಥಿಕ ಸಂಕಷ್ಟ ಎದುರಿಸಿದ್ದ ‘ನಮ್ಮ ಮೆಟ್ರೊ’ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್‌) ವರಮಾನವೂ ಹೆಚ್ಚಳವಾಗುತ್ತಿದೆ.

ಕೋವಿಡ್‌ ಪೂರ್ವದಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಅಧಿಕವಾಗಿತ್ತು. 2020ರ ಜನವರಿ ಹಾಗೂ ಫೆಬ್ರುವರಿಯಲ್ಲಿ ಕ್ರಮವಾಗಿ 1.29 ಕೋಟಿ ಹಾಗೂ 1.18 ಕೋಟಿ ಮಂದಿ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಸಂಚರಿಸಿದ್ದರು. ಮಾರ್ಚ್‌ನಲ್ಲಿ ಈ ಸಂಖ್ಯೆ 66.52 ಲಕ್ಷಕ್ಕೆ ಇಳಿದಿತ್ತು. ಆದರೆ, ಡಿಸೆಂಬರ್‌ ವೇಳೆಗೆ 28.87 ಲಕ್ಷಕ್ಕೆ ಕುಸಿದಿತ್ತು. ನಿಲ್ದಾಣಗಳಲ್ಲಿನ ವಾಹನ ನಿಲುಗಡೆಯಿಂದ ಬರುತ್ತಿದ್ದ ಆದಾಯವೂ ಕಡಿಮೆಯಾಗಿದ್ದರಿಂದ ಬಿಎಂಆರ್‌ಸಿಎಲ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ADVERTISEMENT

ಈ ವರ್ಷದ ಜನವರಿ ಹಾಗೂ ಫೆಬ್ರುವರಿಯಲ್ಲಿ 85 ಲಕ್ಷಕ್ಕಿಂತ ಕಡಿಮೆ ಇದ್ದ ಪ್ರಯಾಣಿಕರ ಸಂಖ್ಯೆ, ಮಾರ್ಚ್‌ನಲ್ಲಿ ಗಣನೀಯ ಏರಿಕೆ ಕಂಡಿತ್ತು. 31 ದಿನಗಳಲ್ಲಿ ಒಟ್ಟು 1.09 ಕೋಟಿ ಮಂದಿ ಮೆಟ್ರೊ ಪ್ರಯಾಣ ಮಾಡಿದ್ದರು. ಹೀಗಾಗಿ ಬಿಎಂಆರ್‌ಸಿಎಲ್‌ ಒಟ್ಟು ₹98.36 ಲಕ್ಷ ವರಮಾನ ಗಳಿಸಿತ್ತು.

‘ಈ ವರ್ಷದ ಆರಂಭದ ಎರಡು ತಿಂಗಳಲ್ಲಿ ಸರಾಸರಿ 2.7 ಲಕ್ಷ ಮಂದಿ ಮೆಟ್ರೊದಲ್ಲಿ ಸಂಚರಿಸಿದ್ದರು. ಹೀಗಾಗಿ ವರಮಾನ ಕ್ಷೀಣಿಸಿತ್ತು. ಆದರೆ ಮಾರ್ಚ್‌ ತಿಂಗಳ ನಂತರ ಪರಿಸ್ಥಿತಿ ಸುಧಾರಿಸಿದೆ. ಹಿಂದಿನ ಮೂರು ದಿನಗಳಲ್ಲಿ ನಿತ್ಯ ಸರಾಸರಿ 4.4 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. ಹೀಗಾಗಿ ವರಮಾನವೂ ಏರಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಕೋವಿಡ್‌ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದ ಐಟಿ ಕಂಪನಿಗಳ ಬಹುಪಾಲು ನೌಕರರು ಕಚೇರಿಗಳಿಗೆ ಮರಳಿದ್ದಾರೆ. ಮುಂದಿನ ವಾರದಿಂದ ಮತ್ತಷ್ಟು ಮಂದಿ ಕಚೇರಿಯಿಂದಲೇ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.ಮಳೆಗಾಲ ಮುಗಿದ ಮೇಲೆ ನಗರದಲ್ಲಿ ಮತ್ತಷ್ಟು ಚಟುವಟಿಕೆಗಳು ಗರಿಗೆದರಲಿದ್ದು ಮೆಟ್ರೊ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಜಾಹೀರಾತು ಮೂಲಕ ಆದಾಯ ಸಂಗ್ರಹಿಸುವ ಉದ್ದೇಶದಿಂದ ಟೆಂಡರ್‌ ಕರೆಯಲಾಗಿತ್ತು. ಕೋವಿಡ್‌ನಿಂದಾಗಿ ಯಾವ ಕಂಪನಿಯೂ ಆಸಕ್ತಿ ತೋರಿರಲಿಲ್ಲ. ಈಗ ಮರು ಟೆಂಡರ್‌ ಆಹ್ವಾನಿಸಲು ನಿರ್ಧರಿಸಿದ್ದೇವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲುಗಳ ಸೇವೆ ವಿಸ್ತರಿಸುವ ಹಾಗೂ ರೈಲು ಗಾಡಿಗಳ ಸಂಚಾರ ಹೆಚ್ಚಿಸುವ ಆಲೋಚನೆಯೂ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.