ಬೆಂಗಳೂರು: ‘ಕೊರೊನಾ ವೈರಾಣುವಿನ ಉಪತಳಿ ಅಪಾಯಕಾರಿಯಲ್ಲ. ಆದರೂ ಶಾಲಾ–ಕಾಲೇಜುಗಳು ಪ್ರಾರಂಭ ಆಗುತ್ತಿರುವುದರಿಂದ 3–4 ದಿನ ಪರಿಸ್ಥಿತಿ ಅವಲೋಕಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಕೋವಿಡ್ ಪೀಡಿತರು ವಿಶೇಷ ಆರೈಕೆ ಇಲ್ಲದೆಯೇ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಜನರು ಆತಂಕ ಪಡಬೇಕಾದ ಪರಿಸ್ಥಿತಿಯಿಲ್ಲ’ ಎಂದು ಹೇಳಿದರು.
‘ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳಕ್ಕಾಗಿ ಪ್ರಯೋಗಾಲಯಗಳಿಗೆ ಪರೀಕ್ಷಾ ಕಿಟ್‌ಗಳನ್ನು ಕಳಿಸಲಾಗುತ್ತಿದೆ. 3–4 ದಿನಗಳಲ್ಲಿ ಪರಿಸ್ಥಿತಿಯ ಚಿತ್ರಣ ಸಿಗಲಿದೆ. ಕೇಂದ್ರ ಸರ್ಕಾರದ ಸೂಚನೆ ಹಾಗೂ ತಜ್ಞರ ಸಲಹೆ ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಸದ್ಯ ಗಡಿ ಭಾಗದಲ್ಲಿ ನಿರ್ಬಂಧದಂತಹ ಕ್ರಮ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗೆ ಅಗತ್ಯ ಕಿಟ್‌ಗಳು ಲಭ್ಯವಿವೆ. ಉಸಿರಾಟದ ತೀವ್ರ ಸಮಸ್ಯೆ (ಸಾರಿ) ಹಾಗೂ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿಆರ್‌ಡಿಎಲ್) ಇರುವ ಕಡೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ನಿಮ್ಹಾನ್ಸ್ ಸಂಸ್ಥೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ವೈರಾಣು ಸಂಸ್ಥೆಯ (ಎನ್‌ಐವಿ) ಬೆಂಗಳೂರು ಘಟಕ ಸೇರಿ 10 ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಸಿದ್ಧತೆಯಾಗಿದೆ. ಒಂದು ತಿಂಗಳಿಗಾಗುವಷ್ಟು, ಅಂದಾಜು 5 ಸಾವಿರ ಆರ್‌ಟಿ–ಪಿಸಿಆರ್ ಪರೀಕ್ಷಾ ಕಿಟ್‌ಗಳ ಖರೀದಿಗೆ ಸೂಚನೆ ನೀಡಲಾಗಿದೆ’ ಎಂದರು.
‘ಕೋವಿಡ್ ಪರೀಕ್ಷೆಗೆ ಸದ್ಯ 2,500 ರ್‍ಯಾಪಿಡ್ ಆ್ಯಂಟಿಜನ್ ಕಿಟ್, 1.30 ಲಕ್ಷ ಆರ್‌ಎನ್‌ಎ ಕಿಟ್ ಹಾಗೂ 2 ಲಕ್ಷ ವಿಟಿಎಂ ಕಿಟ್‌ಗಳು ಲಭ್ಯವಿವೆ. ಹತ್ತು ಪ್ರಯೋಗಾಲಯಗಳಿಗೆ ಪರೀಕ್ಷೆ ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.