ADVERTISEMENT

ಕೊರೊನಾ ಇಲ್ಲದಿದ್ದರೂ ಪಾಸಿಟಿವ್ ವರದಿ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 19:32 IST
Last Updated 10 ಸೆಪ್ಟೆಂಬರ್ 2020, 19:32 IST
ಕೊರೊನಾ ಸೋಂಕು ಪತ್ತೆ ಸಾಧನ
ಕೊರೊನಾ ಸೋಂಕು ಪತ್ತೆ ಸಾಧನ    

ಯಲಹಂಕ: ‘ಬಿಬಿಎಂಪಿಯಿಂದ ಕೋವಿಡ್‌ ಪರೀಕ್ಷೆ ವೇಳೆ ಗೋಲ್‌ಮಾಲ್‌ ನಡೆಯುತ್ತಿದೆ. ನೆಗೆಟಿವ್‌ ಇರುವ ವ್ಯಕ್ತಿಗಳಿಗೂ ಬಿಬಿಎಂಪಿಯು ಪಾಸಿಟಿವ್‌ ವರದಿ ನೀಡಿ ಮಾನಸಿಕ ಕಿರುಕುಳ ನೀಡುತ್ತಿದೆ’ ಎಂದುಹೆಗ್ಗಡೆನಗರ ಸಮೀಪದ ಭಾರತಿ ಸಿಟಿ ಹೋಮ್ಸ್‌ ಅಪಾರ್ಟ್‌ಮೆಂಟ್‌ ಸಮುಚ್ಚಯನಿವಾಸಿಗಳು ಆರೋಪಿಸಿದ್ದಾರೆ.

‘ಆಗಸ್ಟ್ 16ರಂದು ಬಿಬಿಎಂಪಿ ವತಿಯಿಂದ 79 ಜನರಿಗೆ ರ‍್ಯಾಂಡಮ್‌್ ಪರೀಕ್ಷೆ ನಡೆಸಲಾಗಿತ್ತು. ನಂತರ ಐದು ದಿನಗಳ ಬಳಿಕ ಬಿಬಿಎಂಪಿ ನಿಯಂತ್ರಣ ಕೊಠಡಿಯಿಂದ ಕರೆಮಾಡಿ, 16 ಜನರಿಗೆ ಪಾಸಿಟಿವ್ ಬಂದಿದೆ ಎಂದು ಮಾಹಿತಿನೀಡಿ, ನೀವು ಯಲಹಂಕದ ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದು ದಾಖಲಾಗಬೇಕು ಎಂದು ತಿಳಿಸಿದರು. ನಮಗೆ ರೋಗದ ಯಾವುದೇ ಲಕ್ಷಣಗಳಿಲ್ಲದ ಕಾರಣ, ಮನೆಗಳಲ್ಲಿಯೇ ಕ್ವಾರಂಟೈನ್ ಆದೆವು’ ಎಂದು ಅಪಾಟರ್್ ಮೆಂಟ್ ಮಾಲೀಕರ ಸಂಘದ ಅಧ್ಯಕ್ಷೆ ಹೇಮಾ ಮಹೇಶ್ ತಿಳಿಸಿದರು.

‘ನಂತರ ನಮಗೆ ಅನುಮಾನ ಬಂದಿದ್ದರಿಂದ 16 ಜನರು ವಿವಿಧ ಖಾಸಗಿ ಲ್ಯಾಬ್ ಮತ್ತು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ವರದಿ ಬಂದಿದೆ. ಆದರೂ ಸಹ ಬಿಬಿಎಂಪಿ ನಿಯಂತ್ರಣ ಕೊಠಡಿಯಿಂದ ನಿತ್ಯವೂ ಕರೆಮಾಡಿ, ನೀವು ಕೂಡಲೇ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು. ಇಲ್ಲದಿದ್ದರೆ ನಿಮ್ಮೆಲ್ಲರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ, ಪೊಲೀಸರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಒತ್ತಡ ಹಾಕುತ್ತಿದ್ದಾರೆ. ಇದರಿಂದ ನಮಗೆ ಮಾನಸಿಕ ಕಿರುಕುಳವಾಗುತ್ತಿದೆ’ ಎಂದು ಅವರು ದೂರಿದರು.

ADVERTISEMENT

‘ರೋಗಲಕ್ಷಣಗಳಿರುವ ವ್ಯಕ್ತಿಗಳ ಗಂಟಲು ದ್ರವದ ಮಾದರಿ ಪಡೆದು, ಆರ್‌ಟಿ ಪಿಸಿಆರ್ ಪರೀಕ್ಷೆಗೊಳಪಡಿಸಿದಾಗ ವರದಿಯಲ್ಲಿ ಪಾಸಿಟಿವ್ ಬಂದಿರುವುದು ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ವರದಿ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಡಿ.ಆರ್.ಅಶೋಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.