ADVERTISEMENT

ಕ್ಯಾನ್ಸರ್‌ ರೋಗಿಗಳಿಗೆ ಕೋವಿಡ್‌ ಪರೀಕ್ಷೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ವ್ಯವಸ್ಥೆ l ರೋಗಿಗಳಿಗೆ ಸಮಸ್ಯೆಯಾಗದಂತೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 20:03 IST
Last Updated 24 ಏಪ್ರಿಲ್ 2020, 20:03 IST
ಕೋವಿಡ್ ಪರೀಕ್ಷೆಗೆ ಸಜ್ಜುಗೊಂಡಿರುವ ಅತ್ಯಾಧುನಿಕ ಮಾಲಿಕ್ಯೂಲರ್ ಪ್ರಯೋಗಾಲಯ
ಕೋವಿಡ್ ಪರೀಕ್ಷೆಗೆ ಸಜ್ಜುಗೊಂಡಿರುವ ಅತ್ಯಾಧುನಿಕ ಮಾಲಿಕ್ಯೂಲರ್ ಪ್ರಯೋಗಾಲಯ   

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸೋಮವಾರದಿಂದ ಕೋವಿಡ್‌ ಪರೀಕ್ಷೆ ಮಾಡಿ, ಅಗತ್ಯ ಚಿಕಿತ್ಸೆಗಳನ್ನು ಒದಗಿಸಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವ್ಯವಸ್ಥೆ ಮಾಡಿಕೊಂಡಿದೆ.

ಸಂಸ್ಥೆಗೆ ಸಾಮಾನ್ಯ ದಿನಗಳಲ್ಲಿ ರಾಜ್ಯದ ವಿವಿಧೆಡೆಯಿಂದ ನಿತ್ಯ ಸರಾಸರಿ 1,200 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರು. 1,300 ಮಂದಿ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ಭೀತಿ ಹೆಚ್ಚಿದ ಬೆನ್ನಲ್ಲಿಯೇ ಸರ್ಕಾರದ ಸೂಚನೆ ಅನುಸಾರ ಸಂಸ್ಥೆಯು ತುರ್ತಾಗಿ ಅಗತ್ಯ ಇರುವ ಚಿಕಿತ್ಸೆಗಳಿಗೆ ಮಾತ್ರ ಬರುವಂತೆ ರೋಗಿಗಳಲ್ಲಿ ಮನವಿ ಮಾಡಿ, ಕೆಲ ಚಿಕಿತ್ಸೆಗಳನ್ನು ಮುಂದೂಡುವಂತೆ ಸೂಚಿಸಿತ್ತು.

ಇದರಿಂದಾಗಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇ 85 ರಷ್ಟು ಇಳಿಕೆಯಾಗಿದ್ದು,ಕೀಮೋಥೆರಪಿ, ರೇಡಿಯೋಥೆರಪಿ, ಶಸ್ತ್ರಚಿಕಿತ್ಸೆ ಹಾಗೂ ವಿವಿಧ ಚಿಕಿತ್ಸೆಗಳಿಗೆ ಸಾವಿರಾರು ಮಂದಿ ಎದುರುನೋಡುತ್ತಿದ್ದಾರೆ.

ADVERTISEMENT

ಈಗಾಗಲೇ ಫಾಲೋಅ‍ಪ್‌ಗೆ ಸೂಚಿಸಿದ ರೋಗಿಗಳ ಸಂಖ್ಯೆ 200ರ ಗಡಿ ದಾಟಿದೆ. ಹಲವಾರು ರೋಗಿಗಳು ಸಂಸ್ಥೆಗೆ ಕರೆ ಮಾಡಿ, ಚಿಕಿತ್ಸೆಯ ಬಗ್ಗೆ ವಿಚಾರಿಸಲು ಆರಂಭಿಸಿದ್ದಾರೆ. ಈ ಕಾರಣದಿಂದ ಕೋವಿಡ್‌ ಪರೀಕ್ಷೆ ಮಾಡಿ, ರೋಗಿಗಳನ್ನು ದಾಖಲಿಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ. ಸದ್ಯ ಸಂಸ್ಥೆಯಲ್ಲಿ ಒಂದು ಅತ್ಯಾಧುನಿಕ ಮಾಲಿಕ್ಯೂಲರ್ ಪ್ರಯೋಗಾಲಯ ಯಂತ್ರವಿದ್ದು, ಇದನ್ನೇ ಕೋವಿಡ್‌ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತದೆ. ನಿತ್ಯ ಒಂದು ಸಾವಿರ ಮಂದಿಯನ್ನು ಪರೀಕ್ಷೆ ಮಾಡುವ ಸಾಮರ್ಥ್ಯವನ್ನು ಪ‍್ರಯೋಗಾಲಯ ಹೊಂದಿದೆ.

ಮೂರು ಗಂಟೆಗಳಲ್ಲಿ ಫಲಿತಾಂಶ: ‘ನಮ್ಮಲ್ಲಿ ಮಾಲಿಕ್ಯೂಲರ್ ಪ್ರಯೋಗಾಲಯದಲ್ಲಿ ಎರಡು ಯಂತ್ರಗಳಿದ್ದವು. ಅದರಲ್ಲಿ ಒಂದನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೊಂದನ್ನು ನಾವು ಕೋವಿಡ್ ಪರೀಕ್ಷೆಗೆ ಬಳಸಿಕೊಳ್ಳುತ್ತೇವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

‘ಬಂದ ರೋಗಿಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುತ್ತದೆ. ಬಳಿಕ ಅವರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿ ‍ಪಡೆದು ಪರೀಕ್ಷೆ ಮಾಡುತ್ತೇವೆ. ಫಲಿತಾಂಶಕ್ಕೆ ಮೂರು ಗಂಟೆ ಬೇಕಾಗುತ್ತದೆ. ಅಲ್ಲಿಯವರಿಗೆ ರೋಗಿಗಳಿಗೆ ಕುಳಿತುಕೊಳ್ಳಲು ಸಂಸ್ಥೆಯ ಆವರಣದಲ್ಲಿಯೇ ವ್ಯವಸ್ಥೆ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.