ADVERTISEMENT

‘ಡಿಸೆಂಬರ್‌ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 22:41 IST
Last Updated 21 ಜೂನ್ 2021, 22:41 IST

ಬೆಂಗಳೂರು: ‘ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ನಾಗರಿಕರಿಗೂ ಲಸಿಕೆ ನೀಡಿ ರಾಜ್ಯವನ್ನು ಕೋವಿಡ್‌ ಮುಕ್ತಗೊಳಿಸುವ ಗುರಿ ಇದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಶಿವಾಜಿನಗರದ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಸಿಕಾ ಮಹಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

‘ರಾಜ್ಯದಲ್ಲಿ15 ಲಕ್ಷಕ್ಕೂ ಅಧಿಕ ಕೋವಿಶೀಲ್ಡ್ ಹಾಗೂ 7 ಲಕ್ಷ ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಇದೆ. ಈಗಾಗಲೇ 1.86 ಕೋಟಿಜನರಿಗೆ ಲಸಿಕೆ ನೀಡಲಾಗಿದೆ. ರಾಜ್ಯದಾದ್ಯಂತ ಒಟ್ಟು 13 ಸಾವಿರ ಲಸಿಕಾ ಕೇಂದ್ರಗಳಿದ್ದು ಒಂದು ಕೇಂದ್ರದಲ್ಲಿ ದಿನಕ್ಕೆ 70 ರಿಂದ 80 ಜನರಿಗೆ ಲಸಿಕೆ ನೀಡಿದರೂ ನಿಗದಿತ ಗುರಿ ಮುಟ್ಟಬಹುದು. ಇದಕ್ಕೆ ಜನರ ಸಂಪೂರ್ಣ ಸಹಕಾರ ಬೇಕಿದೆ’ ಎಂದು ಅವರು ಹೇಳಿದರು.

ADVERTISEMENT

‘ಆರಂಭದಲ್ಲಿಕೋವಿಡ್ ಲಸಿಕೆ ಕುರಿತು ಜನರಲ್ಲಿ ಅಂಜಿಕೆ ಇತ್ತು. ಕೆಲ ಪಕ್ಷಗಳ ನಾಯಕರೇ ಈ ಕುರಿತು ಅಪಪ್ರಚಾರ ನಡೆಸಿದ್ದರು. ಆದರೆ, ಕ್ರಮೇಣ ನಂಬಿಕೆ ಬಂದಿದೆ. ಲಸಿಕೆ ಪಡೆದರೆ ಕೋವಿಡ್‌ನಿಂದ ಪಾರಾಗಬಹುದು ಎಂಬ ಅರಿವು ಈಗ ಜನರಲ್ಲಿ ಮೂಡಿದೆ.ಜೊತೆಗೆ ಕಪ್ಪು ಶಿಲೀಂಧ್ರಕ್ಕೆ ಅಗತ್ಯಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಕೋವಿಡ್‌ ಖಿನ್ನತೆ: ಉಚಿತ ಸಹಾಯವಾಣಿ

ಕೋವಿಡ್‌ನಿಂದಾಗಿ ತಮ್ಮವರನ್ನು ಕಳೆದುಕೊಂಡು ಆಘಾತ, ಖಿನ್ನತೆ, ಆತಂಕ ಸೇರಿದಂತೆ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗಾಗಿ ಸಲಹೆಗಳನ್ನು ನೀಡಲು ಯಲಹಂಕದ ಪೀಪಲ್ ಟ್ರೀ ಮಾರ್ಗ ಮಾನಸಿಕ ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರವುಉಚಿತ ಸಹಾಯವಾಣಿ ಆರಂಭಿಸಿದೆ.

‘ಕೋವಿಡ್‌ನಿಂದ ಹಲವು ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ಅತೀವ ನೋವಿಗೆ ಸಿಲುಕಿವೆ. ಅಂತಹವರಿಗೆ ಈ ಸಹಾಯವಾಣಿ ನೆರವಾಗಲಿದೆ’ ಎಂದು ಪೀಪಲ್ ಟ್ರೀ ಆಸ್ಪತ್ರೆಯ ಸಿಇಒ ಜೋತಿ ನೀರಜಾ ತಿಳಿಸಿದರು.
ಆಸ್ಪತ್ರೆಯ ಮಾನಸಿಕ ಕಾಳಜಿ ವಿಭಾಗದ ಮುಖ್ಯಸ್ಥ ಡಾ.ಸತೀಶ ರಾಮಯ್ಯ, ‘ಉಚಿತ ಸಲಹಾವಾಣಿಗೆ ಸಂಬಂಧಿಸಿದ ಮಾಹಿತಿಗಾಗಿ www.peopletreemaaarga.com ಅಥವಾ 080–46659999 ಸಂಖ್ಯೆಗೆ ಕರೆ ಮಾಡಬಹುದು’ ಎಂದರು.

‘ಗಾಯಕ ಶಶಿಧರ್ ಕೋಟೆ ಅವರ ಸಂಗೀತ ಸಂಜೆಯ ಕಾರ್ಯಕ್ರಮದೊಂದಿಗೆಈ ಸಹಾಯವಾಣಿ ಸೇವೆಗೆ ಮಂಗಳವಾರ (ಜೂ.22) ಚಾಲನೆ ನೀಡಲಾಗುವುದು. ಸಂಜೆ 7ರಿಂದ ಪೀಪಲ್ ಟ್ರೀ ಮಾರ್ಗ ಫೇಸ್‌ಬುಕ್ ಪುಟದಲ್ಲಿ ಇದರ ನೇರಪ್ರಸಾರ ಇರಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.