ADVERTISEMENT

ಕೋವಿಡ್‌ ಲಸಿಕೆ ಅಭಿಯಾನ ವಿಸ್ತರಣೆ

ಬಿಬಿಎಂಪಿ: ಉದ್ಯಾನ, ವಾರ್ಡ್‌ ಕಚೇರಿ, ಸಮುದಾಯ ಭವನಗಳಲ್ಲೂ ಲಸಿಕಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:25 IST
Last Updated 19 ಮೇ 2021, 19:25 IST
   

ಬೆಂಗಳೂರು: ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಹತ್ತಿರವಿರುವ ಉದ್ಯಾನ, ಸಮುದಾಯ ಭವನ, ಪಾಳಿಕೆಯ ವಾರ್ಡ್ ಕಚೇರಿ, ಆಟದ ಮೈದಾನ ಸೇರಿದಂತೆ ಹೆಚ್ಚು ಸ್ಥಳಾವಕಾಶವಿರುವ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಅಲ್ಲಿಯೂ ಕೋವಿಡ್‌ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (ಆರ್‌ಡಬ್ಲ್ಯುಎ) ಪ್ರತಿನಿಧಿಗಳ ಜೊತೆ ವರ್ಚುವಲ್ ರೂಪದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಬಿಎಂಪಿ ವ್ಯಾಪ್ತಿಯ ಪಿಎಚ್‌ಸಿಗಳಲ್ಲಿ ಕೋವಿಡ್ ಪರೀಕ್ಷೆ ಹಾಗೂ ಲಸಿಕಾ ಅಭಿಯಾನಗಳೆರಡನ್ನೂ ನಡೆಸಲಾಗುತ್ತಿದೆ. ಲಸಿಕೆ ಪಡೆಯಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಪಿಎಚ್‌ಸಿಗಳಲ್ಲಿ ಸ್ಥಳಾವಕಾಶ ಸಾಲುತ್ತಿಲ್ಲ. ಹೆಚ್ಚಿನ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸದ್ಯಕ್ಕೆ 45 ವರ್ಷ ಮೇಲ್ಪಟ್ವರಿಗೆ ಕೋವಿಡ್‌ ಲಸಿಕೆಯ ಎರಡನೇ ಡೋಸ್ ನೀಡಲು ಆದ್ಯತೆ ನೀಡಲಾಗಿದೆ. ನಂತರ 45 ವರ್ಷದವರಿಗೆ ಮೊದಲನೇ ಡೋಸ್ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕೋವಿನ್‌ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡು ಮುಂಗಡವಾಗಿ ಸಮಯ ಗೊತ್ತುಪಡಿಸಿಕೊಳ್ಳಬೇಕು. ನಂತರವೇ ಲಸಿಕೆ ಪಡೆಯಲು ಕೇಂದ್ರಕ್ಕೆ ಬರಬೇಕು’ ಎಂದು ಹೇಳಿದರು.

‘ಕೋವಿಡ್ ಸೊಂಕು ದೃಢಪಟ್ಟವರು ಪಾಲಿಕೆ ಸ್ಥಾಪಿಸಿರುವ ಚಿಕಿತ್ಸಾ ನಿರ್ಧಾರ ಕೇಂದ್ರಕ್ಕೆ (ಟ್ರಯಾಜ್ ಸೆಂಟರ್‌) ನೇರವಾಗಿ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬಹುದು. ಸೋಂಕಿತರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ವೈದ್ಯರು ಮನೆ ಆರೈಕೆ, ಕೊವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲು ನೆರವಾಗಲಿದ್ದಾರೆ’ ಎಂದರು.

‘ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟು ರೋಗದ ಸೌಮ್ಯ ಲಕ್ಷಣಗಳಿದ್ದರೆ ಮನೆಯಲ್ಲೇ ಪ್ರತ್ಯೇಕಗೊಂಡು ಆರೈಕೆ ಪಡೆಯಬೇಕು. ಸೋಂಕಿತರು ಇರುವ ಪ್ರದೇಶಕ್ಕೆ ಪಾಲಿಕೆಯ ತಂಡವು ಭೇಟಿ ನೀಡಿ ಅವರ ಜೊತೆ ನೇರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಿದೆ’ ಎಂದು ತಿಳಿಸಿದರು.

‘ಕೋವಿಡ್ ಆರೈಕೆ ಕೇಂದ್ರಗಲ್ಲಿ ಆಮ್ಲಜನಕದ ಸಿಲಿಂಡರ್ ಹಾಗೂ ಸಾಂದ್ರಕಗಳ ವ್ಯವಸ್ಥೆ ಮಾಡಲಾಗಿದೆ. ಸೊಂಕಿತರಿಗೆ ಆಮ್ಲಜನಕದ ಪೂರಣ ಮಾಡುವ ಸೌಕರ್ಯವೂ ಇಲ್ಲಿದೆ. ಆಸ್ಪತ್ರೆಗಳು ಹೋಟೆಲ್‌ಗಳು ಜೊತೆ ಸಮನ್ವಯ ಮಾಡಿಕೊಂಡು ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ತೆರೆದಿವೆ. ಹೆಚ್ಚು ಪ್ರಕರಣಗಳು ಕಂಡು ಬಂದ ಕಡೆ ಮೈಕ್ರೊ ಕಂಟೈನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಸೊಂಕಿತರ ಕೈಗೆ ಮುದ್ರೆ ಹಾಕಲಾಗುತ್ತಿದೆ. ಇದಕ್ಕೆ ಸಹಕರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.