ADVERTISEMENT

ಖಾಸಗಿ ಆಸ್ಪತ್ರೆ: ಲಸಿಕೆಯಿದ್ದರೂ ಕೇಳುವವರಿಲ್ಲ !

ಸಾವಿರಾರು ರೂಪಾಯಿ ಪಾವತಿಸಿ ಲಸಿಕೆ ಪಡೆಯಲು ಜನತೆ ಹಿಂದೇಟು * ಸರ್ಕಾರಿ ಕೇಂದ್ರಗಳಲ್ಲಿ ಹೆಚ್ಚಿದ ದಟ್ಟಣೆ

ವರುಣ ಹೆಗಡೆ
Published 10 ಆಗಸ್ಟ್ 2021, 17:13 IST
Last Updated 10 ಆಗಸ್ಟ್ 2021, 17:13 IST
ಡಾ. ಪ್ರಸನ್ನ ಎಚ್‌.ಎಂ
ಡಾ. ಪ್ರಸನ್ನ ಎಚ್‌.ಎಂ   

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ದಾಸ್ತಾನು ಇದ್ದರೂ ಕೇಳುವವರಿಲ್ಲದಂತಾಗಿದೆ. ಸಾವಿರಾರು ರೂಪಾಯಿ ಪಾವತಿಸಬೇಕೆಂಬ ಕಾರಣಕ್ಕೆ ಜನರು ಹಿಂದೇಟು ಹಾಕಲಾರಂಭಿಸಿದ್ದಾರೆ. ಹೀಗಾಗಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚತೊಡಗಿದೆ.

ಸದ್ಯ ನಗರದಲ್ಲಿ ಪ್ರತಿನಿತ್ಯ ಸರಾಸರಿ 60 ಸಾವಿರದಿಂದ 70 ಸಾವಿರ ಡೋಸ್ ಲಸಿಕೆ ನೀಡಲಾಗುತ್ತಿದೆ. ಕೋವಿಡ್‌ ಮೂರನೇ ಅಲೆಯ ಬಗ್ಗೆ ತಜ್ಞರು ಮುನ್ಸೂಚನೆ ನೀಡಿರುವುದರಿಂದ ಸರ್ಕಾರಿ ಲಸಿಕಾ ಕೇಂದ್ರಗಳ ಆವರಣದಲ್ಲಿ ಜನರ ಸಾಲು ಬೆಳೆಯತೊಡಗಿದೆ. 392 ಸರ್ಕಾರಿ ಆರೋಗ್ಯ ಕೇಂದ್ರಗಳು ಹಾಗೂ 294 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ. ಕೆಲ ಕಂಪನಿಗಳು ಹಾಗೂ ಕಾರ್ಖಾನೆಗಳು ಬಿಬಿಎಂಪಿ ಸಹಯೋಗದಲ್ಲಿ ಸಿಬ್ಬಂದಿಗೆ ಲಸಿಕೆ ಒದಗಿಸಲು ಪ್ರತ್ಯೇಕ ಶಿಬಿರವನ್ನೂ ಏರ್ಪಡಿಸುತ್ತಿವೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಬೇಡಿಕೆ ಇಲ್ಲದಂತಾಗಿದೆ.

ಪ್ರಾರಂಭಿಕ ದಿನಗಳಲ್ಲಿ ಲಸಿಕೆಯನ್ನು ಖಾಸಗಿ ಕೇಂದ್ರಗಳಿಗೆ ಹಂಚಿಕೆ ಮಾಡಿದ ಸರ್ಕಾರ, ಪ್ರತಿ ಡೋಸ್‌ಗೆ ಸೇವಾ ಶುಲ್ಕ ₹ 100 ಪಡೆಯಲು ಅವಕಾಶ ನೀಡಿತ್ತು. ನಂತರ ಕಂಪನಿಗಳಿಂದ ನೇರವಾಗಿ ಖರೀದಿಸಿ, ವಿತರಿಸಲು ಸೂಚಿಸಲಾಗಿತ್ತು. ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಲಸಿಕೆಗೆ ದಿಢೀರ್ ಬೇಡಿಕೆ ಹೆಚ್ಚಿ, ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದಾಗಿ ಕೆಲ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಲಭ್ಯವಾಗುತ್ತಿತ್ತು. ಕೋವಿನ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿ, ಹಣಪಾವತಿಸಲು ಮುಂದಾದರೂ ಕಾಯಬೇಕಾದ ಪರಿಸ್ಥಿತಿಯಿತ್ತು.

ADVERTISEMENT

ಲಸಿಕೆ ಹಂಚಿಕೆಯಲ್ಲಿನ ಸಮಸ್ಯೆಗೆ ಈಗ ಪರಿಹಾರ ಒದಗಿಸಿರುವ ಕೇಂದ್ರ ಸರ್ಕಾರ, ಕೋವಿನ್‌ ಪೋರ್ಟಲ್‌ ಮೂಲಕ ಉತ್ಪಾದನಾ ಕಂಪನಿಗಳಿಗೆ ಬೇಡಿಕೆ ಸಲ್ಲಿಸುವ ವ್ಯವಸ್ಥೆ ಕಲ್ಪಿಸಿದೆ. ಇದರಿಂದಾಗಿ ಖಾಸಗಿ ಕೇಂದ್ರಗಳಿಗೆ ಹಣ ಪಾವತಿಸಿದ ಬಳಿಕ ಲಸಿಕೆ ಪೂರೈಕೆಯಾಗುತ್ತಿದೆ. ಆದರೆ, ಲಸಿಕೆ ಪಡೆಯಲು ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿರುವುದರಿಂದ ಕೆಲ ಆಸ್ಪತ್ರೆಗಳು ಲಸಿಕೆ ಖರೀದಿಗೆ ಹಿಂದೇಟು ಹಾಕಲಾರಂಭಿಸಿವೆ.

ಬಾರದ ಜನತೆ: ಖಾಸಗಿ ಆಸ್ಪತ್ರೆಗಳು ಸದ್ಯ ‘ಕೋವಿಶೀಲ್ಡ್‌’ ಲಸಿಕೆಯ ಪ್ರತಿ ಡೋಸ್‌ಗೆ ₹ 750 ನಿಗದಿಪಡಿಸಿವೆ. ‘ಕೋವ್ಯಾಕ್ಸಿನ್’ ಲಸಿಕೆಗೆ ₹ 1,410 ಹಾಗೂ ‘ಸ್ಪುಟ್ನಿಕ್’ ಲಸಿಕೆಗೆ ₹ 1,145 ಗೊತ್ತುಪಡಿಸಿವೆ. ಇದರ ಜತೆಗೆ ಪ್ರತಿ ಡೋಸ್‌ ಲಸಿಕೆಗೆ ಸೇವಾ ಶುಲ್ಕ ₹ 200 ಪಾವತಿಸಬೇಕಾಗುತ್ತದೆ. ಹಾಗಾಗಿ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಬೇಡಿಕೆ ಇಲ್ಲದಂತಾಗಿದೆ.

‘ಹಣಕೊಟ್ಟು ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿಲ್ಲ. ಹಾಗಾಗಿ, ಸರ್ಕಾರವೇ ನಮ್ಮ ಕೇಂದ್ರಗಳಿಗೆ ಲಸಿಕೆಯನ್ನು ಈ ಮೊದಲಿನಂತೆ ಒದಗಿಸಿದಲ್ಲಿ ಸೇವಾ ಶುಲ್ಕವನ್ನು ಮಾತ್ರ ಪಡೆದು, ಲಸಿಕೆ ನೀಡಲು ಸಿದ್ಧವಿದ್ದೇವೆ. ಇದರಿಂದ ಲಸಿಕಾ ಅಭಿಯಾನಕ್ಕೆ ಕೂಡ ವೇಗ ದೊರೆಯಲಿದೆ. ಸರ್ಕಾರಿ ಕೇಂದ್ರಗಳ ಮುಂದೆ ದಿನವಿಡೀ ಕಾಯುವುದು ಕೂಡ ತಪ್ಪುತ್ತದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

ಅರ್ಧದಷ್ಟು ಲಸಿಕೆ ಖರೀದಿ

ಕೇಂದ್ರ ಸರ್ಕಾರವು ಜುಲೈ ತಿಂಗಳಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 60 ಲಕ್ಷ ಡೋಸ್‌ಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಶೇ 25ರಷ್ಟು ನಿಗದಿಪಡಿಸಲಾಗಿತ್ತು. ಖರೀದಿಸಬೇಕಾದ 15 ಲಕ್ಷ ಡೋಸ್‌ಗಳಲ್ಲಿ 7.20 ಲಕ್ಷ ಡೋಸ್‌ಗಳನ್ನು ಮಾತ್ರ ಖರೀದಿಸಿವೆ. ಹಣ ಪಾವತಿಸಿದ ಬಳಿಕ ಪೂರೈಕೆಯಲ್ಲಿ ವಿಳಂಬ, ಜನರ ನಿರಾಸಕ್ತಿಯಿಂದಾಗಿ ಉಳಿದ ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.