ADVERTISEMENT

ತುಸು ಏರಿಕೆ ಕಂಡ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 20:21 IST
Last Updated 27 ಅಕ್ಟೋಬರ್ 2020, 20:21 IST

ಬೆಂಗಳೂರು: ಕೋವಿಡ್ ಪೀಡಿತರ ಸಂಖ್ಯೆಯಲ್ಲಿ ತುಸು ಏರಿಕೆ ಕಂಡಿದ್ದು, ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆಯವರೆಗಿನ 24 ಗಂಟೆಯಲ್ಲಿ 3,691 ಹೊಸ ಪ್ರಕರಣಗಳು ವರದಿಯಾಗಿವೆ.

ಹಿಂದಿನ ಮೂರು ತಿಂಗಳುಗಳಲ್ಲೇ ದಾಖಲೆ ಎನಿಸುವ ಕಡಿಮೆ ಮಟ್ಟಕ್ಕೆ (3130) ಸೋಂಕಿತರ ಸಂಖ್ಯೆ ಸೋಮವಾರ ಇಳಿಕೆಯಾಗಿತ್ತು. ಈ ಲೆಕ್ಕಾಚಾರ ಮಂಗಳವಾರ ಬದಲಾಗಿದ್ದು, ಏರು ಮುಖ ಕಂಡಿದೆ. 24 ಗಂಟೆಗಳಲ್ಲಿ 14,386 ರ್‍ಯಾಪಿಡ್ ಆಂಟಿಜೆನ್‌ ಪರೀಕ್ಷೆ ಹಾಗೂ 52,316 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿ ಒಟ್ಟು 66,701 ಜನರನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ.

24 ಗಂಟೆಗಳ ಈ ಅವಧಿಯಲ್ಲಿ 7,740 ಜನರಿಗೆ ಕಾಯಿಲೆ ವಾಸಿಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ, ಈವರೆಗೆ 7,27,298 ಮಂದಿಗೆ ಕೋವಿಡ್‌ ಗುಣವಾದಂತಾಗಿದೆ. ಒಟ್ಟು 71,330 ಸಕ್ರಿಯ ಪ್ರಕರಣಗಳಿದ್ದು, 944 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 24 ಮಂದಿ ಸೇರಿದಂತೆ ರಾಜ್ಯದಲ್ಲಿ 44 ಮಂದಿ ಮೃತ ಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಇದರಿಂದಾಗಿ ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 11 ಸಾವಿರದತ್ತ (10,991) ಸಾಗಿದೆ.

ಬೆಂಗಳೂರಿನಲ್ಲಿ 1,874 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.29 ಲಕ್ಷ ದಾಟಿದೆ. ಮೈಸೂರಿನಲ್ಲಿ 188, ವಿಜಯಪುರದಲ್ಲಿ 128, ಮಂಡ್ಯದಲ್ಲಿ 123 ಹಾಗೂ ದಕ್ಷಿಣಕನ್ನಡದಲ್ಲಿ 122 ಹೊಸ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.